ಭಾರತದ ದಕ್ಷಿಣ ತುದಿಯಲ್ಲಿರುವ ಧನುಷ್ಕೋಟಿ ಇಂದು ಕೇವಲ ಪ್ರವಾಸಿ ತಾಣವಾಗಿ ಉಳಿದಿರಬಹುದು. ಆದರೆ 59 ವರ್ಷಗಳ ಹಿಂದೆ ನಡೆದ ಒಂದು ನೈಸರ್ಗಿಕ ವಿಕೋಪ ಇಡೀ ನಗರವನ್ನೇ ಭೂಪಟದಿಂದ ಅಳಿಸಿಹಾಕಿತ್ತು. 1964ರ ಡಿಸೆಂಬರ್ 22ರಂದು ಸಂಭವಿಸಿದ ಆ ಕರಾಳ ಘಟನೆ ಇಂದಿಗೂ ಇತಿಹಾಸದ ಪುಟಗಳಲ್ಲಿ ರಕ್ತಸಿಕ್ತವಾಗಿ ಉಳಿದಿದೆ.
ಒಂದೇ ಕ್ಷಣದಲ್ಲಿ ಜಲಸಮಾಧಿಯಾದ ರೈಲು ಅಂದು ರಾತ್ರಿ 11:55ಕ್ಕೆ ಪಂಬನ್ನಿಂದ ಧನುಷ್ಕೋಟಿಗೆ ಪ್ಯಾಸೆಂಜರ್ ರೈಲು ಹೊರಟಿತ್ತು. ಅದರಲ್ಲಿ ನೂರಾರು ಪ್ರಯಾಣಿಕರಿದ್ದರು. ರೈಲು ಧನುಷ್ಕೋಟಿ ನಿಲ್ದಾಣ ತಲುಪುವಷ್ಟರಲ್ಲಿ ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿತ್ತು. ಸುಮಾರು 240 ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿ ಮತ್ತು ಸುಮಾರು 25 ಅಡಿ ಎತ್ತರಕ್ಕೆ ಜಿಗಿದ ಅಲೆಗಳು ಇಡೀ ರೈಲನ್ನು ಹಳಿ ಸಮೇತ ಸಮುದ್ರದ ಒಳಕ್ಕೆ ಎಳೆದುಕೊಂಡು ಹೋದವು. ಲೋಕೋ ಪೈಲಟ್ಗೆ ಪ್ರತಿಕ್ರಿಯಿಸಲು ಸಮಯವೇ ಸಿಗಲಿಲ್ಲ. ರೈಲಿನಲ್ಲಿದ್ದ ಪ್ರತಿಯೊಬ್ಬರೂ ಅಂದು ಜಲಸಮಾಧಿಯಾದರು.
ಎಚ್ಚರಿಕೆ ನೀಡಿದ್ದರೂ ನಡೆದಿದ್ದೇನು? ಹವಾಮಾನ ಇಲಾಖೆಯು ಅಂದು ಚಂಡಮಾರುತದ ಮುನ್ಸೂಚನೆ ನೀಡಿತ್ತು. ಆದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ರೈಲನ್ನು ಓಡಿಸಿದ್ದು ದೊಡ್ಡ ತಪ್ಪಾಯಿತು ಎಂದು ಇಂದಿಗೂ ವಿಶ್ಲೇಷಿಸಲಾಗುತ್ತದೆ. ಆ ಆರು ಬೋಗಿಗಳ ಪ್ಯಾಸೆಂಜರ್ ರೈಲಿನ ಅವಶೇಷಗಳು ಇಂದಿಗೂ ಪತ್ತೆಯಾಗಿಲ್ಲ ಎಂದರೆ ಆ ಅಲೆಗಳ ಆರ್ಭಟ ಎಷ್ಟಿತ್ತು ಎಂಬುದನ್ನು ಊಹಿಸಬಹುದು.
ಸ್ಮಶಾನವಾದ ಅಭಿವೃದ್ಧಿ ಹೊಂದಿದ್ದ ನಗರ ಧನುಷ್ಕೋಟಿ ಒಂದು ಕಾಲದಲ್ಲಿ ಶ್ರೀಲಂಕಾಗೆ ಹಡಗು ಸಂಪರ್ಕ ಹೊಂದಿದ್ದ ಅತ್ಯಂತ ಕಾರ್ಯನಿರತ ನಗರವಾಗಿತ್ತು. ಇಲ್ಲಿ ರೈಲ್ವೆ ನಿಲ್ದಾಣ, ಚರ್ಚ್, ಆಸ್ಪತ್ರೆ, ಶಾಲೆ ಮತ್ತು ಅಂಚೆ ಕಚೇರಿಗಳಿದ್ದವು. ಆದರೆ ಆ ಒಂದು ರಾತ್ರಿ ಚಂಡಮಾರುತದ ಅಬ್ಬರಕ್ಕೆ ಎಲ್ಲವೂ ನೆಲಸಮವಾದವು. ಅಂದು ಕ್ರಿಸ್ಮಸ್ ತಯಾರಿ ನಡೆಸುತ್ತಿದ್ದ ಚರ್ಚ್ ಇಂದು ಕೇವಲ ಅಸ್ಥಿಪಂಜರದಂತೆ ನಿಂತಿದೆ.
ಇಂದಿಗೂ ರಾತ್ರಿ ಯಾರೂ ಅಲ್ಲಿ ಉಳಿಯುವುದಿಲ್ಲ ಈ ದುರಂತದ ನಂತರ ಧನುಷ್ಕೋಟಿಯನ್ನು ವಾಸಕ್ಕೆ ಯೋಗ್ಯವಲ್ಲದ ‘ಭೂತ ನಗರಿ’ (Ghost Town) ಎಂದು ಘೋಷಿಸಲಾಯಿತು. ಇಲ್ಲಿ ಹಗಲಿನಲ್ಲಿ ವ್ಯಾಪಾರ ಮಾಡುವ ಸ್ಥಳೀಯರು ಕೂಡ ಸೂರ್ಯ ಮುಳುಗುವ ಮುನ್ನವೇ ಅಲ್ಲಿಂದ ಸುರಕ್ಷಿತ ಪ್ರದೇಶಗಳಿಗೆ ವಾಪಸ್ ತೆರಳುತ್ತಾರೆ. ಅಲ್ಲಿನ ಪಾಳುಬಿದ್ದ ಕಟ್ಟಡಗಳು ಮತ್ತು ರೈಲ್ವೆ ಹಳಿಗಳು ಅಂದಿನ ಭೀಕರ ದುರಂತಕ್ಕೆ ಮೌನ ಸಾಕ್ಷಿಯಾಗಿ ನಿಂತಿವೆ.
