ಮಡಿಕೇರಿ: ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ 26 ವರ್ಷದ ಆನೆ ಕಂಜನ್ ದಾಳಿಯಿಂದ ಗಾಯಗೊಂಡಿದ್ದ 53 ವರ್ಷದ ಮಾರ್ತಾಂಡ ಆನೆ ಮಂಗಳವಾರ ಮೃತಪಟ್ಟಿತು.
ಸಾವಿನ ಮಾಹಿತಿಯನ್ನು ವೈದ್ಯರು ಪ್ರಕಟಿಸುತ್ತಿದ್ದಂತೆ, ಅದರ ಮಾವುತ ಗೌಸ್ ಮತ್ತು ಕಾವಾಡಿ ನವೀನ್ ಅವರು ಕಳೇಬರದ ಮುಂದೆ ಕುಸಿದು ರೋದಿಸಿದರು. ಇನ್ನಿತರ ಮಾವುತರು ಮತ್ತು ಕಾವಾಡಿಗರ ಕಣ್ಣಲ್ಲೂ ನೀರು ಜಿನುಗಿತು. ನದಿಯಲ್ಲಿ ರ್ಯಾಫ್ಟಿಂಗ್ ಮಾಡುತ್ತಿದ್ದ ಸಿಬ್ಬಂದಿಯೂ ಮರುಗಿದರು.
ಸೋಮವಾರ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆಯಲ್ಲಿ ಕಂಜನ್ ಏಕಾಏಕಿ ಮಾರ್ತಾಂಡನ ಮೇಲೆ ದಾಳಿ ನಡೆಸಿತ್ತು. ಕೆಳಗೆ ಬಿದ್ದ ಮಾರ್ತಾಂಡನ ಅಡಿ ನೀರಿನಲ್ಲಿ ಸಿಲುಕಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ಜೋಯ್ಸಿ ಮೃತ ಪಟ್ಟಿದ್ದರು. ಮಾರ್ತಾಂಡ ತೀವ್ರತರವಾಗಿ ಗಾಯಗೊಂಡಿತ್ತು. ಕಂಜನ್ ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿ, ಮರ್ಮಾಂಗದ ಭಾಗಕ್ಕೆ ತಿವಿದಿತ್ತು. ಕೆಳಗೆ ಬಿದ್ದ ಮೇಲೂ ಗುದ್ದಿತ್ತು.
‘ದೇಹದಲ್ಲಿ 5ರಿಂದ 6 ಕಡೆ ಆಳವಾದ ಗಾಯಗಳಾಗಿದ್ದವು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ’ ಎಂದು ವೈದ್ಯರೊಬ್ಬರು ತಿಳಿಸಿದರು
ಸೌಮ್ಯ ಸ್ವಭಾವದ ಮಾರ್ತಾಂಡ:
ಹೆಸರು ಮಾರ್ತಾಂಡ ಎಂದಿದ್ದರೂ ಆನೆ ಸೌಮ್ಯ ಸ್ವಭಾವದ್ದಾಗಿತ್ತು. ಬೇರೆ ಆನೆಗಳ ತಂಟೆಗೆ ಹೋಗುತ್ತಿರಲಿಲ್ಲ. ಪ್ರವಾಸಿಗರು ಎಷ್ಟೇ ಕಿರಿಕಿರಿ ಮಾಡಿದರೂ ಸಹಿಸಿಕೊಳ್ಳುತ್ತಿತ್ತು. ಹೀಗಾಗಿ ಎಲ್ಲರಿಗೂ ಪ್ರಿಯವಾಗಿತ್ತು. ಪ್ರವಾಸಿಗರಿಂದ ಸ್ನಾನ ಮಾಡಿಸಲು ಸಿಬ್ಬಂದಿ ಇದನ್ನೇ ಮುಂದೆ ಬಿಡುತ್ತಿದ್ದರು. ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರಿಂದ ಮಾವುತ, ಕಾವಾಡಿಗಳಿಗೂ ಅಚ್ಚುಮೆಚ್ಚಿನದ್ದಾಗಿತ್ತು.
ಹಾಸನ ಜಿಲ್ಲೆಯ ಆಲೂರಿನಲ್ಲಿ 2023ರಲ್ಲಿ ಸೆರೆ ಹಿಡಿಯಲಾಗಿದ್ದ ಈ ಮಾರ್ತಾಂಡ ಆನೆ ಮಖನಾ (ದಂತ ಇರದ ಗಂಡು ಆನೆ) ಜಾತಿಗೆ ಸೇರಿತ್ತು. ಬರೋಬ್ಬರಿ 4,500 ಕೆ.ಜಿ. ತೂಕವಿತ್ತು. 3 ವರ್ಷಗಳಿಂದ ದುಬಾರೆಯಲ್ಲಿ ಸಿಬ್ಬಂದಿಗೂ ಪ್ರಿಯವಾಗಿತ್ತು. ಹೀಗಾಗಿ, ಶಿಬಿರದಲ್ಲಿ ಶೋಕ ಮಡುಗಟ್ಟಿದೆ.
ಆನೆಯ ಕೆಳಗೆ ಸಿಲುಕಿ ಮೃತಪಟ್ಟ ಜೋಯ್ಸಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸೋಮವಾರ ರಾತ್ರಿಯೇ ತಮಿಳುನಾಡಿಗೆ ಅವರ ಪತಿ ಒಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮದವರಿಗೆ ನಿರ್ಬಂಧ: ವರದಿ ಮಾಡಲು ಮಂಗಳವಾರ ಸಾಕಾನೆ ಶಿಬಿರಕ್ಕೆ ತೆರಳಿದ್ದ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಯಿತು.
ಕಾವೇರಿ ನದಿಯಲ್ಲಿ ನೀರು ತುಸು ಹೆಚ್ಚಿದ್ದರಿಂದ ನಡೆದು ಹೋಗಲು ಸಾಧ್ಯವಿರಲಿಲ್ಲ. ನದಿ ದಾಟಲು ಬೋಟ್ ಕೊಡಲಿಲ್ಲ. ನದಿಯ ಆಚೆ ದಡದಲ್ಲಿ ನಿಂತುಕೊಂಡೇ ಕೆಲವರು ದೃಶ್ಯಾವಳಿ
ಗಳನ್ನು ಸೆರೆ ಹಿಡಿದರು.
