ಚನ್ನರಾಯಪಟ್ಟಣ, ಜು.17: ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಕಾನೂನುಬದ್ಧವಾಗಿ ಹೋರಾಟ ನಡೆಸಿದ ರೈತರ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ) ಹಾಸನ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮೀಸೆ ಮಂಜಣ್ಣ ಆರೋಪಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಭಾಗದ ರೈತರ ಆಕ್ರಂದನವನ್ನು ಸರ್ಕಾರ ನಿರ್ಲಕ್ಷಿಸಿದ್ದು, ಸಮರ್ಪಕ ಮಾಹಿತಿ ನೀಡದೇ ಹಾಗೂ ರೈತರ ಸಮ್ಮತಿ ಪಡೆಯದೇ ಭೂಮಿಗೆ ಪ್ರವೇಶಿಸಿ ಸರ್ವೆ ನಡೆಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಕಾನೂನುಬದ್ಧವಾಗಿ ಧ್ವನಿ ಎತ್ತಿದ ರೈತರ ವಿರುದ್ಧ ಎಫ್ಐಆರ್ ದಾಖಲಿಸಿ, ಪೊಲೀಸ್ ಇಲಾಖೆಯ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವುದು ಅಧಿಕಾರದ ದುರ್ಬಳಕೆಯಾಗಿದೆ ಎಂದು ಅವರು ಟೀಕಿಸಿದರು.
ರೈತರ ವಿರುದ್ಧ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು. ವಶಕ್ಕೆ ಪಡೆದಿರುವ ಅಮಾಯಕ ರೈತರನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ) ಸರ್ಕಾರವನ್ನು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕುರುವಂಕ ಶಿವಣ್ಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
