ಶೃಂಗೇರಿ : ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಂಗಸಂಸ್ಥೆಯಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.
ಜೂನ್ 29 (ಸೋಮವಾರ) ರಂದು ರೋಟರಿ ಕ್ಲಬ್ ಶೃಂಗೇರಿ ಹಾಗೂ ತೆಕ್ಕೂರು ಗ್ರಾಮಸ್ಥರ ಸಹಯೋಗದಲ್ಲಿ ತೆಕ್ಕೂರು ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಅದೇ ರೀತಿ ಜೂನ್ 30ರಂದು ವಿಕಾಸ ಸ್ವಸಹಾಯ ಸಂಘ ಸಿದ್ದರಮಠ, ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘ, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶ್ರೀ ಸಿದ್ದರಂಗ ಟ್ರಸ್ಟ್ ಸಿದ್ದರಮಠ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಿಶು ವೈದ್ಯಕೀಯ, ಸ್ತ್ರೀರೋಗ, ಮೂಳೆ ಮತ್ತು ಕೀಲು ಚಿಕಿತ್ಸೆ, ನೇತ್ರ ಹಾಗೂ ದಂತ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ವೈದ್ಯರ ಸಲಹೆಯಂತೆ ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನೂ ವಿತರಿಸಲಾಗುತ್ತದೆ.
ಮೊಬೈಲ್ ಆಸ್ಪತ್ರೆಯ ಮೂಲಕ ಮಲ್ಟಿ-ಸ್ಪೆಷಾಲಿಟಿ ವೈದ್ಯಕೀಯ ಸಮಾಲೋಚನೆ, ಇಸಿಜಿ, ಪ್ರಯೋಗಾಲಯ ಪರೀಕ್ಷೆಗಳು, ಎಕ್ಸ್-ರೇ ಸೇರಿದಂತೆ ವಿವಿಧ ಆರೋಗ್ಯ ತಪಾಸಣಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮಹಿಳೆಯರ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಶಿಬಿರದಲ್ಲಿ ಎಲ್ಲಾ ರೋಗಿಗಳಿಗೆ ಲ್ಯಾಬ್ ಪರೀಕ್ಷೆಗಳು ಹಾಗೂ ಎಕ್ಸ್-ರೇ ಸೇವೆಗಳಲ್ಲಿ ಶೇ.50 ರಿಯಾಯಿತಿ ಕಲ್ಪಿಸಲಾಗಿದೆ. ವೈದ್ಯರ ಉಚಿತ ಸಮಾಲೋಚನೆಯೂ ಲಭ್ಯವಿರುತ್ತದೆ.
ಶಿಬಿರಕ್ಕೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೋಂದಣಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಹಳೆಯ ವೈದ್ಯಕೀಯ ದಾಖಲೆಗಳು ಹಾಗೂ ವೈದ್ಯಕೀಯ ಇತಿಹಾಸದ ವರದಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಿರಣ್ – 63629 67810 ಅನ್ನು ಸಂಪರ್ಕಿಸಬಹುದು.
