ಗೋವಾ: ಭಾರತೀಯ ಕರಾವಳಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ಕರಾವಳಿ ರಕ್ಷಣಾ ಪಡೆಗೆ (Indian Coast Guard) ಹೊಸ ತಲೆಮಾರಿನ “ಆದಮ್ಯ ವರ್ಗ”ದ ವೇಗದ ಗಸ್ತು ನೌಕೆ ಐಸಿಜಿಎಸ್ ಅಚಲ್ ಅನ್ನು ಮೇ 9, 2026ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಗೋವಾದ ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ನಡೆದ ಸಮಾರಂಭದಲ್ಲಿ ಈ ನೌಕೆಯನ್ನು ಸೇವೆಗೆ ಸಮರ್ಪಿಸಲಾಯಿತು.
51 ಮೀಟರ್ ಉದ್ದದ ಈ ಅತ್ಯಾಧುನಿಕ ನೌಕೆಯನ್ನು ಗೋವಾ ಶಿಪ್ಯಾರ್ಡ್ ಲಿಮಿಟೆಡ್ ಸಂಸ್ಥೆಯೇ ವಿನ್ಯಾಸಗೊಳಿಸಿ ನಿರ್ಮಿಸಿದ್ದು, ಇದರಲ್ಲಿನ ಶೇಕಡಾ 50ಕ್ಕೂ ಹೆಚ್ಚು ಉಪಕರಣಗಳು ಸ್ವದೇಶಿ ತಂತ್ರಜ್ಞಾನ ಆಧಾರಿತವಾಗಿವೆ. ಇದು ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಐಸಿಜಿಎಸ್ ಅಚಲ್ ಎರಡು 3000 ಕಿಲೋವಾಟ್ ಸಾಮರ್ಥ್ಯದ ಡೀಸೆಲ್ ಎಂಜಿನ್ಗಳನ್ನು ಹೊಂದಿದ್ದು, ಗರಿಷ್ಠ 27 ನಾಟ್ ವೇಗದಲ್ಲಿ ಸಂಚರಿಸಬಲ್ಲದು. ಸುಮಾರು 1500 ನಾಟಿಕಲ್ ಮೈಲುಗಳ ಕಾರ್ಯಾಚರಣಾ ಸಾಮರ್ಥ್ಯ ಹೊಂದಿರುವ ಈ ನೌಕೆಯಲ್ಲಿ 5 ಅಧಿಕಾರಿಗಳು ಹಾಗೂ 34 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಗುಜರಾತಿನ ವಾಡಿನಾರ್ ಪ್ರದೇಶದಲ್ಲಿ ನಿಯೋಜನೆಗೊಳ್ಳಲಿರುವ ಈ ನೌಕೆ ಕರಾವಳಿ ಮತ್ತು ಸಮುದ್ರದ ಮೇಲ್ವಿಚಾರಣೆ, ಕಳ್ಳಸಾಗಣೆ ತಡೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ, ಸಮುದ್ರ ಮಾಲಿನ್ಯ ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸಲಿದೆ.
ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಡಿಜಿ (ಅಕ್ವಿಸಿಷನ್) ಶ್ರೀ ಎ. ಅಂಬರಸು, ಐಎಎಸ್ ಅವರು ನೌಕೆಯನ್ನು ಅಧಿಕೃತವಾಗಿ ಸೇವೆಗೆ ಸಮರ್ಪಿಸಿದರು. ಕಮಾಂಡೆಂಟ್ (ಜೆಜಿ) ನವೀನ್ ಕುಮಾರ್ ಅವರು ಐಸಿಜಿಎಸ್ ಅಚಲ್ನ ಕಮಾಂಡಿಂಗ್ ಅಧಿಕಾರಿ ಆಗಿರುತ್ತಾರೆ
