ನವದೆಹಲಿ:
ವಿಶ್ವದಾದ್ಯಂತ ಮೈಕ್ರೋಸಾಫ್ಟ್ ೩೬೫ (Microsoft 365) ಸೇವೆಗಳಲ್ಲಿ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರತ ಸೇರಿದಂತೆ ೭೪ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮೈಕ್ರೋಸಾಫ್ಟ್ ೩೬೫ ಆಫೀಸ್ ಸ್ಯೂಟ್ನ ಪ್ರಮುಖ ಕ್ಲೌಡ್ ಆಧಾರಿತ ಸೇವೆಗಳಾದ ಔಟ್ಲುಕ್ (Outlook), ಟೀಮ್ಸ್ (Teams), ವರ್ಡ್ ಮತ್ತು ಎಕ್ಸೆಲ್ ಬಳಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ವ್ಯತ್ಯಯದ ಅವಧಿ ಮತ್ತು ಪ್ರಸ್ತುತ ಸ್ಥಿತಿ:
-
ಆರಂಭವಾದ ಸಮಯ: ಗುರುವಾರ ಸಂಜೆ ೬ ಗಂಟೆಗೆ (GMT ಸಮಯ) ಅಂದರೆ ಭಾರತೀಯ ಕಾಲಮಾನ ಗುರುವಾರ ರಾತ್ರಿ ೧೧:೩೦ಕ್ಕೆ ಈ ತಾಂತ್ರಿಕ ಸಮಸ್ಯೆ ಶುರುವಾಗಿದೆ.
-
ಸಮಸ್ಯೆ ಪರಿಹಾರಕ್ಕೆ ಕಾಲಾವಕಾಶ: ೨೨ ಗಂಟೆಗಳು ಕಳೆದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ವರದಿಗಳ ಪ್ರಕಾರ, ತಾಂತ್ರಿಕ ದೋಷವನ್ನು ಪೂರ್ಣಪ್ರಮಾಣದಲ್ಲಿ ಸರಿಪಡಿಸಲು ಮೈಕ್ರೋಸಾಫ್ಟ್ ೪೮ ಗಂಟೆಗಳ ಕಾಲಾವಕಾಶ ಕೋರಿದೆ ಎನ್ನಲಾಗಿದೆ.
-
ಹಂತ ಹಂತವಾಗಿ ಮರುಸ್ಥಾಪನೆ: ಮೈಕ್ರೋಸಾಫ್ಟ್ ತಾಂತ್ರಿಕ ತಂಡವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯಕ್ಕೆ ‘ಟೀಮ್ಸ್ ಮೀಟಿಂಗ್ಸ್’ ಮತ್ತು ಚಾಟ್ ಸೇವೆಗಳು ಸರಿಯಾಗಿವೆ. ಆದರೆ, ‘ಔಟ್ಲುಕ್ ಇಮೇಲ್’ ಸೇವೆಯ ಸಮಸ್ಯೆ ಇನ್ನೂ ಮುಂದುವರಿದಿದೆ.
ತಾಂತ್ರಿಕ ದೋಷಕ್ಕೆ ಕಾರಣವೇನು?
ಸರ್ವರ್ನಲ್ಲಿ ಉಂಟಾದ ಏರಿಳಿತ, ನೆಟ್ವರ್ಕ್ ಸಮಸ್ಯೆ ಹಾಗೂ ಒಂದು ಕಾನ್ಫಿಗರೇಶನ್ ಅಪ್ಡೇಟ್ (Configuration Update) ಈ ವ್ಯತ್ಯಯಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದೇ ವೇಳೆ, ಈ ಘಟನೆಯ ಹಿಂದೆ ಯಾವುದೇ ರೀತಿಯ ಹ್ಯಾಕಿಂಗ್ ಅಥವಾ ವೈರಸ್ ದಾಳಿ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ಕಚೇರಿಗಳು ಮತ್ತು ವಿಮಾನಯಾನ ಸೇವೆಗಳ ಮೇಲೆ ಪರಿಣಾಮ:
ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ದೈನಂದಿನ ಸಂವಹನಕ್ಕೆ ಅಡ್ಡಿಯಾಗಿದೆ. ಭಾರತದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ (IndiGo) ಮತ್ತು ಆಕಾಶ ಏರ್ಲೈನ್ಸ್ (Akasa Air) ಸಂಸ್ಥೆಗಳ ಇಮೇಲ್ ಸಪೋರ್ಟ್ ಸೇವೆಗಳ ಮೇಲೂ ಈ ತಾಂತ್ರಿಕ ದೋಷ ಪರಿಣಾಮ ಬೀರಿದೆ.
