ಕಲಬುರಗಿ: ಕಲ್ಯಾಣ ಕರ್ನಾಟಕದ ವಿವಿಧೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ. ಅಫಜಲಪುರ ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ 500 ಎಕರೆ ಜಮೀನಿನಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿವೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿಯಲ್ಲಿ ಸೋಮವಾರ ಸಿಡಿಲು ಬಡಿದು ಎರಡು ಹಸು, 20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಜೋಗಿನ ಮನೆ ಬಳಿ ಮರ ಬಿದ್ದು 3 ಕಾರು ಜಖಂಗೊಂಡಿವೆ.
ಬೀದರ್ ಜಿಲ್ಲೆಯ ಭಾಲ್ಕಿ, ಕಮಲನಗರ, ಚಿಟಗುಪ್ಪ, ಔರಾದ್ನಲ್ಲಿ ಧಾರಾಕಾರ ಮಳೆಯಾಗಿದೆ. ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಹಾಗೂ ಬಾವಗಿ, ಕಮಠಾಣ ಗ್ರಾಮದಲ್ಲೂ ಮನೆಯ ಶೀಟುಗಳು ಹಾರಿ ಹೋಗಿವೆ.
