ಇಡೀ ಪಟ್ಟಣದಲ್ಲಿ ಗವ್ವೆನಿಸುವ ನೀರವತೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ ಯಾವುದೇ ವಾಹನ ಸಂಚಾರದ ಸುಳಿವಿರಲಿಲ್ಲ. ಹೋಟೆಲ್ನ ಮೆಟ್ಟಿಲಲ್ಲಿ ಚಳಿಗೆ ಮುದುರಿ ಮಲಗಿದ್ದ ನಾಯಿಯೊಂದು ನನ್ನ ಹೆಜ್ಜೆಯ ಸಪ್ಪಳಕ್ಕೆ ಮಿಡುಕಿ ಎದ್ದು ಎಚ್ಚರಾಗಿ, ತಲೆಯೆತ್ತಿ ನೋಡಿ ನಿಧಾನವಾಗಿ ಗುರುಗುಟ್ಟಿ, ಹಾಗೇ ನಿಂತಲ್ಲಿಯೇ ಎರಡು ಸುತ್ತು ತಿರುಗಿ, ಮತ್ತದೇ ಭಂಗಿಯಲ್ಲಿ ನಿದ್ರಾದೇವಿಗೆ ಶರಣಾಯಿತು.
ನಿರ್ಜನ ರಸ್ತೆ, ನೀರವ ವಾತಾವರಣ. ಹಾದಿಬದಿಯ ಟ್ಯೂಬ್ಲೈಟ್ನ ಬೆಳಕಿನಲ್ಲಿ ಮಂಜು ರಾಶಿರಾಶಿಯಾಗಿ ಬೀಳುತ್ತಿರುವುದು ಕಾಣಿಸುತ್ತಿತ್ತು. ಲೈಟ್ನ ಸುತ್ತ ಬೃಹದಾಕಾರದ ಬಲೂನನ್ನು ಅಂತರಾಳದಲ್ಲಿ ಯಾರೋ ಸೃಷ್ಟಿಸಿದ್ದಾರೇನೋ ಅನ್ನಿಸುವಂತೆ, ಹಾದಿಯುದ್ದಕ್ಕೂ ಇದ್ದ ಕರೆಂಟಿನ ಕಂಬಗಳ ಬೆಳಕಿಗೆ ಮಂಜು ಮುತ್ತಿಕೊಂಡಂತೆ ಭಾಸವಾಗುತ್ತಿತ್ತು. ಮನುಷ್ಯ ಪ್ರಾಣಿಯೊಂದರ ಸುಳಿವೂ ಇರಲಿಲ್ಲ.
ಅಲ್ಲಲ್ಲಿ ಜೀರುಂಡೆಗಳು ತಮ್ಮ ರೆಕ್ಕೆಗಳನ್ನು ಉಜ್ಜಿ ಜರ್ಕ್ ಜರ್ಕ್ ಎಂದು ಸದ್ದು ಮಾಡುತ್ತಿದ್ದವು. ರಸ್ತೆಬದಿಯ ಚರಂಡಿಗಳಲ್ಲಿ ಹಂದಿಮರಿ ಗಾತ್ರದ ಹೆಗ್ಗಣಗಳು ಗುಡುಗುಡು ಗದ್ದಲ ಮಾಡುತ್ತಾ, ಒಂದನ್ನೊಂದು ಅಟ್ಟಿಸಿಕೊಂಡು ಗೊರಗೊರ ಸದ್ದು ಮಾಡುತ್ತಿದ್ದವು. ಅಂಗಡಿಯವರು ರಾತ್ರಿ ಕಸವನ್ನೆಲ್ಲ ಗುಡ್ಡೆಹಾಕಿ ಬೆಂಕಿಕೊಟ್ಟ ಪೇಪರ್, ರಟ್ಟಿನ ಬೂದಿ, ಬೀಸಲೋ ಬೇಡವೋ ಎಂಬಂತೆ ಮಿಸುಕಾಡುತ್ತಿದ್ದ ಗಾಳಿಗೆ ನಿಧಾನವಾಗಿ ಹರಡುತ್ತಾ ಚೆದುರಿಹೋಗುತ್ತಿತ್ತು.
ಯಾವುದೋ ಲಾರಿಯ ಚಕ್ರಕ್ಕೆ ಸಿಕ್ಕಿ ಎದೆಯಿಂದ ಬಾಲದವರೆಗೆ ಚಟ್ನಿಯಾಗಿದ್ದ ಬೆಕ್ಕೊಂದು ರಸ್ತೆಯ ಮೇಲೆ ಅನಾಥ ಶವವಾಗಿ ಬಿದ್ದಿತ್ತು. ರಸ್ತೆಬದಿಯಲ್ಲಿ ಎಳನೀರು, ಹಣ್ಣು ಮಾರುವ ಅಂಗಡಿಯವರು ಹಿಂದಿನ ದಿನದ ವ್ಯಾಪಾರ ಮುಗಿಸಿ ತಮ್ಮ ಅಂಗಡಿಯನ್ನು ಎತ್ತಿಡದೇ, ಹಾಗೇ ಅದಕ್ಕೆ ಟಾರ್ಪಾಲಿನ್ ಹೊದೆಸಿ ಮುಚ್ಚಿದ್ದರು.
ಹಣ್ಣಿನ ರಾಶಿಯ ಜೊತೆಯೇ ಹಾಸಿಗೆ ಹಾಸಿಕೊಂಡು ಮಲಗಿದ್ದವನೊಬ್ಬ ಕೆಮ್ಮಿ, ಮಗ್ಗುಲು ಹೊರಳಿಸಿದಾಗ ನಾನು ಬೆಚ್ಚಿಬಿದ್ದೆ. ಯಾವುದೋ ವಸ್ತುವಿನ ರಾಶಿಯೆಂದುಕೊಂಡು ದಾಟಿ ಮುಂದೆ ಹೋಗುತ್ತಿದ್ದ ನನಗೆ, ಆ ರಾಶಿಯಿಂದ ಕೆಮ್ಮಿದ ಸದ್ದು ಕೇಳಿ ಬೆಚ್ಚಿದಂತಾಯಿತು.
ರೂಂ ಚೆಕ್ಔಟ್ ಮಾಡಿ ಬಸ್ಸ್ಟಾಂಡಿಗೆ ಬಂದಾಗ, ಆ ರಾತ್ರಿಯ ನೀರವತೆ ಮತ್ತು ನಿರ್ಜನ ವಾತಾವರಣ ಕಂಡು ದಿಗಿಲಾದರೂ ಟ್ರೆಕ್ಕಿಂಗ್ನ ರೋಚಕತೆಯನ್ನು ಕಲ್ಪಿಸಿಕೊಳ್ಳುತ್ತಾ ಉತ್ತೇಜನಗೊಳ್ಳುತ್ತಿದ್ದೆ. ನಿರ್ಜನವಾಗಿದ್ದ ಬಸ್ಸ್ಟಾಂಡ್ನಲ್ಲಿ ಬಂದು ನಿಂತ ನನಗೆ ರಾಷ್ಟ್ರೀಯ ಹೆದ್ದಾರಿಯ ಎಡಬಲಗಳೆರಡೂ ನೇರವಾಗಿ ಸುಮಾರು ಅರ್ಧ ಕಿಲೋಮೀಟರ್ವರೆಗೆ ಕಾಣಿಸುತ್ತಿದ್ದವು. ವಿದ್ಯುತ್ ಕಂಬಗಳ ಮೇಲಿನ ಮಂಜು ಮೆತ್ತಿಕೊಂಡ ಟ್ಯೂಬ್ಲೈಟ್ಗಳು ದೂರದೂರವಾದಂತೆ ಹತ್ತಿ ಹಿಂಜಿದಂತೆ ತೋರುತ್ತಿದ್ದವು.
ಹದಿನೈದಿಪ್ಪತ್ತು ನಿಮಿಷಗಳಿಗೊಮ್ಮೆ ಭಾರೀ ಲೋಡ್ ಹೊತ್ತಿದ್ದ ಲಾರಿಗಳು, ಆಯಿಲ್ ಟ್ಯಾಂಕರ್ಗಳು ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದವು. ಸುಮಾರು ನಾಲ್ಕೈದು ವಾಹನಗಳಿಗೆ ಡ್ರಾಪ್ಗಾಗಿ ಕೈತೋರಿಸಿ ಮುಖಭಂಗ ಮಾಡಿಸಿಕೊಂಡಿದ್ದೆ. ಡ್ರೈವರ್ಗಳು, ಈ ಅಪರಾತ್ರಿಯಲ್ಲಿ ವಾಹನ ನಿಲ್ಲಿಸಲು ಕೈಅಡ್ಡ ಚಾಚಿದ ನನ್ನನ್ನು ನಿರ್ಲಕ್ಷ್ಯದಿಂದಲೂ ಅನುಮಾನದಿಂದಲೂ ನೋಡಿ, ತಾವು ಬರುತ್ತಿದ್ದ ವೇಗದಲ್ಲೇ ಸುಂಯ್ ಎಂದು ಚಲಿಸಿ ಅಂತರ್ಧಾನರಾಗುತ್ತಿದ್ದರು.
ಎಡಬಾಗಕ್ಕೆ ಸ್ವಲ್ಪವೇ ದೂರದಲ್ಲಿ ಎರಡೇ ದೀಪಗಳು ಕಾಣಿಸುತ್ತಿದ್ದು, ಉಳಿದಂತೆ ಪೂರಾ ಕತ್ತಲೆಯ ಕೂಪವಾಗಿದ್ದ ಬಸ್ಸ್ಟಾಂಡ್ನ ರಸ್ತೆಬದಿಯ ಚರಂಡಿ ಮೇಲಿನ ಕಲ್ಲುಚಪ್ಪಡಿಯ ಮೇಲೆ ನಿಂತು, ಭಾರವಾದ ಬ್ಯಾಗನ್ನು ಬೆನ್ನಿಗೆ ನೇತು ಹಾಕಿಕೊಂಡು ಮಾರನಹಳ್ಳಿಗೆ ಹೋಗಲು ಏನಾದರೂ ಸಿಕ್ಕೀತೆಂದು ಕಾಯಲಾರಂಭಿಸಿದೆ.
ಸುಮಾರು ಮುಕ್ಕಾಲು ಗಂಟೆಯ ಕಾಲ ಒಂದೇ ಒಂದು ವಾಹನದ ಸದ್ದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ನಿರಂತರ ವಾಹನ ಸಂಚಾರವಿರುತ್ತೆ, ಯಾವುದರಲ್ಲಿಯಾದರೂ ಹೋಗೋಣ ಎಂದುಕೊಂಡಿದ್ದವನಿಗೆ ಪಿಚ್ಚೆನ್ನಿಸಿತು. ನಿಂತಿದ್ದ ಚಪ್ಪಡಿಯಡಿಯೇ ಹೆಗ್ಗಣಗಳು ದುಡುದುಡನೇ ಓಡಾಡುತ್ತಿದ್ದವು. ಯಾಕೋ ಕೈಗೆ ಕಟ್ಟಿದ್ದ ವಾಚಿನೆಡೆಗೆ ನೋಡಿದೆ; ಅದು ಬೆಳಗಿನ ನಾಲ್ಕೂವರೆ ತೋರಿಸುತ್ತಿತ್ತು.
ಥೋ! ಎಂಥಾ ಕೆಲಸ ಮಾಡಿದೆ!
ಹೊರಡುವ ಆತಂಕದಲ್ಲಿ ನಿದ್ದೆ ಬಾರದೆ, ಇಷ್ಟು ಬೇಗ ಅನವಶ್ಯಕವಾಗಿ ಈ ಅಪರಾತ್ರಿಯಲ್ಲಿ ರಸ್ತೆಬದಿಯಲ್ಲಿ ನಿಲ್ಲುವ ಕೆಲಸ ಮಾಡಿಕೊಂಡೆನಲ್ಲ ಎಂದುಕೊಂಡೆ. ಅಷ್ಟರಲ್ಲಿ ಯಾವುದೋ ವಾಹನ ಆ ಮಂಜಿನಲ್ಲಿ ಎಷ್ಟು ಸಾಧ್ಯವೋ ಅಷ್ಟೇ ಬೆಳಕನ್ನು ಚೆಲ್ಲಿಕೊಂಡು, ಏದುಸಿರು ಬಿಡುತ್ತಾ ದೂರದಲ್ಲಿ ಬರುತ್ತಿತ್ತು.
ಆದದ್ದಾಗಲಿ ಎಂದು ನಿಲ್ಲಿಸಿ ಹತ್ತುವುದೆಂದು ಯೋಚಿಸಿ ಕೈಅಡ್ಡ ಹಾಕಿದೆ. ಆ ಬೃಹದಾಕಾರದ ಲಾರಿ ನನ್ನನ್ನು ಯಕಶ್ಚಿತ್ ಹುಳವೆಂದೂ ಗಮನಿಸದೆ, ಬಂದ ರಾಜಗಾಂಭೀರ್ಯದಿಂದಲೇ ನನ್ನನ್ನು ದಾಟಿಕೊಂಡು ತಿರುವಿನಲ್ಲಿ ಮರೆಯಾಯಿತು. ಮತ್ತೆ ಜೀರುಂಡೆಗಳ ಸದ್ದು ಬಹಳ ಹೊತ್ತು ಕೇಳಿಸುತ್ತಿತ್ತು.
ಮತ್ತೆ ಎರಡು ಹೆಡ್ಲೈಟ್ಗಳನ್ನು ಬಿಟ್ಟುಕೊಂಡು ಟ್ಯಾಂಕರ್ ಒಂದು ಬಂದಂತೆಯೇ ಕೈಅಡ್ಡ ತೋರಿಸಿದರೂ ಕೇರ್ ಮಾಡದೆ ಹೋಯಿತು. ಬೆಳಗಿನ ಜಾವವಾದ್ದರಿಂದ ವಾಹನ ಸಂಚಾರ ವಿರಳವಾಗಿತ್ತು. ರಾತ್ರಿಯಿಡೀ ವಾಹನ ಚಾಲನೆ ಮಾಡಿದವರಿಗೆ ಇದು ನಿದ್ರೆಯ ಸಮಯ. ಮತ್ತೆರಡು ಲಾರಿಗಳು ಬಂದವು; ಅವು ಸ್ವಲ್ಪ ದೂರದಲ್ಲಿ ರಸ್ತೆಬದಿಯಲ್ಲಿ ನಿದ್ರೆಗಾಗಿ ರೆಸ್ಟ್ ತೆಗೆದುಕೊಳ್ಳಲು ನಿಂತವು.
ಅಷ್ಟರಲ್ಲಿ ಯಾರೋ ಒಬ್ಬ ಏನನ್ನೋ ಹೊರಲಾರದೆ, ಅದನ್ನೇ ಅಡ್ಡಾದಿಡ್ಡಿಯಾಗಿ ಹೊತ್ತುಕೊಂಡು ಬರುವುದು ದೂರದಲ್ಲಿ ನೆರಳಿನಂತೆ ಕಾಣಿಸಿತು. ನನ್ನಂತೆ ಯಾರೋ ಅಬ್ಬೇಪಾರಿಯಿರಬೇಕೆಂದು, ಸರಿ, ಈ ನಿರ್ಜನ ಪ್ರದೇಶದಲ್ಲಿ ಜೊತೆಗೆ ನಿಲ್ಲಲಿಕ್ಕಾದರೂ ಒಬ್ಬ ಸಿಕ್ಕಿದನಲ್ಲಾ ಎಂದುಕೊಂಡೆ.
ಹತ್ತಿರ ಬರಬರುತ್ತಾ ನೋಡಿದೆ; ಮಡಚಬಹುದಾದ ಕಬ್ಬಿಣದ ಟೇಬಲ್, ಒಂದು ಸೀಮೆಎಣ್ಣೆಯ ಪಂಪ್ ಸ್ಟೌ, ಮತ್ತಿನ್ನೇನೋ ಚೀಲ, ಒಂದು ಕ್ಯಾನ್ ಹೀಗೆ ಏನೇನೋ ತಂದು ನನ್ನ ಪಕ್ಕದಲ್ಲಿನ ಕರೆಂಟಿನ ಕಂಬದ ಬಳಿ ತಂದಿಳಿಸಿದ. ಬ್ಯಾಗನ್ನು ಕರೆಂಟ್ ಕಂಬಕ್ಕೆ ಸುತ್ತಿದ ತಂತಿಯೊಂದಕ್ಕೆ ನೇತುಹಾಕಿ, ಟೇಬಲ್ ಅನ್ನು ಬಿಡಿಸಿಟ್ಟ.
ಜೇಬಿನಿಂದ ಬೀಡಿ ಕಟ್ಟನ್ನು ತೆಗೆದು ಒಂದು ಬೀಡಿಯನ್ನು ಬಾಯಿಗಿಟ್ಟುಕೊಂಡು ಕಡ್ಡಿ ಗೀರಿ ಸೇದುತ್ತಾ ಹೊಗೆ ಬಿಡತೊಡಗಿದ. ಟೇಬಲ್ ಮೇಲೆ ಸ್ಟೌ ಇಟ್ಟು, ಚೆನ್ನಾಗಿ ಪಂಪ್ ಮಾಡಿ ಹೊತ್ತಿಸಿದ. ಬಿಸಿಯೇರುವವರೆಗೆ ಮೊಳದೆತ್ತರಕ್ಕೆ ಉರಿಯತೊಡಗಿದ ಸ್ಟೌ ಅನ್ನು ಹಾಗೇ ಬಿಟ್ಟು, ಕ್ಯಾನ್ ಹಾಗೂ ಒಂದು ಬಕೆಟ್ ಎತ್ತಿಕೊಂಡು ನಿಂತಿದ್ದಲ್ಲಿಂದ ಹಿಂಭಾಗದಲ್ಲಿದ್ದ ಗಲ್ಲಿಯೊಳಗೆ ಮಾಯವಾದ.
ಅದೆಂಥ ನೀರೋ ತುಂಬಿಸಿಕೊಂಡು ಬಂದು, ಹಾಲಿನ ಪ್ಯಾಕೆಟ್ ಒಡೆದು ಪಾತ್ರೆಯೊಳಗೆ ಹಾಕಿ ಕಾಯಿಸಲು ಶುರು ಮಾಡಿದ. ಚೀಲ ಬಿಚ್ಚಿ ಅದರಿಂದ ಬಿಸ್ಕೆಟ್ ಪ್ಯಾಕ್ಗಳನ್ನೂ, ಬನ್ಗಳನ್ನೂ ಟೇಬಲ್ ಮೇಲೆ ಜೋಡಿಸಿ, ಆ ನಿರ್ಜೀವ ಸ್ಥಳಕ್ಕೆ ಆ ದಿನದ ಆರಂಭದ ಮುನ್ನುಡಿ ಬರೆದೇಬಿಟ್ಟ.
ಅಷ್ಟರಲ್ಲಿ ಮತ್ತೊಂದು ಲಾರಿ ಬಂದು ಈ ಟೀ ಸ್ಟಾಲ್ ಬಳಿ ನಿಂತಿತು. ನನಗೆ ಭಾರೀ ಖುಷಿಯಾಯಿತು. ಇದರಲ್ಲಾದರೂ ಡ್ರಾಪ್ ತಗೋಣವೆಂದುಕೊಂಡೆ. ಡ್ರೈವರ್, ಕ್ಲೀನರ್ಗಳಿಬ್ಬರೂ ಇಳಿದು ಬೀಡಿ ಹೊತ್ತಿಸಿ, ಒಂದಷ್ಟು ಹೊತ್ತು ಹೊಗೆ ಬಿಟ್ಟು, ಬನ್ ತಿಂದು, ಟೀ ಕುಡಿದರು.
ಟೀ ಕುಡಿಯುತ್ತಿದ್ದವರಿಗೆ ನಾನು ಮಾರನಹಳ್ಳಿಯವರೆಗೆ ಬರುವುದಾಗಿ ತಿಳಿಸಿದೆ. ಅವರು ಕೇಳಿಸಿಕೊಂಡು ಅವರವರಲ್ಲೇ ಏನೋ ಮಾತನಾಡಿಕೊಂಡರು. ಆಗುವುದಿಲ್ಲವೆಂದು ಹೇಳಿ ಸೀದಾ ಲಾರಿ ಏರಿ ಹೊರಟರು.
ನನಗೂ ಟೀ ಕುಡಿಯುವ ಮನಸ್ಸಾದರೂ, ಈ ಮನುಷ್ಯ ಎಂಥಾ ನೀರು ಹಾಕಿದ್ದಾನೋ ಎಂದುಕೊಂಡು ಸುಮ್ಮನಾದೆ. ಇನ್ನು ನನ್ನ ಕೆಲಸವಾಗಲಿಲ್ಲವೆಂದು ಯಮಭಾರದ ಬ್ಯಾಗನ್ನು ಬೆನ್ನ ಮೇಲೆ ಸರಿಯಾಗಿ ಕೂರಿಸಿಕೊಂಡು ಮುಂದಿನ ವಾಹನಕ್ಕಾಗಿ ಕಾಯುತ್ತಾ ನಿಂತೆ.
ಆ ರೀತಿಯ ಕತ್ತಲೆಯ ಅಪರಿಚಿತ ಸ್ಥಳದಲ್ಲಿ ದಿಕ್ಕುಗಾಣದೆ ಸಿಕ್ಕಸಿಕ್ಕವರನ್ನು ಡ್ರಾಪ್ಗಾಗಿ ಕೇಳುವುದರ ಪಾಡನ್ನು ಅನುಭವಿಸಿಯೇ ತಿಳಿಯಬೇಕು. ಒಂದು ಬನ್ ತಗೊಂಡು ತಿನ್ನುತ್ತಾ ಟೀ ಸ್ಟಾಲ್ನವನ ಬಳಿ, “ಮಾರನಹಳ್ಳಿಯವರೆಗೆ ಯಾರಾದರೂ ಡ್ರಾಪ್ ಕೊಡ್ತಾರಾ?” ಎಂದು ಕೇಳಿದೆ.
“ಇಷ್ಟು ಹೊತ್ತಿಗೆ ಲಾರಿಗಳೂ ಕಡಿಮೆ ಓಡಾಡ್ತಾವೆ. ನೋಡೋಣ, ಇರಿ. ಮತ್ತ್ಯಾವುದಾದರೂ ಬಂದ್ರೆ ಕೇಳಿ ನೋಡೋಣ,” ಎಂದ.
ಸ್ವಲ್ಪ ಹೊತ್ತಿನಲ್ಲಿ ಭತ್ತದ ಲೋಡಿನ ಲಾರಿಯೊಂದು ಬಂದು ಚಾಲಕ ಟೀ ಕುಡಿಯಲು ಇಳಿದ. ಟೀ ಸ್ಟಾಲ್ನವನು ಅವನೊಡನೆ ನನ್ನ ಬಗ್ಗೆ ಹೇಳಿ, ನನ್ನನ್ನು ಕರೆದುಕೊಂಡು ಹೋಗಲು ಕೇಳಿಕೊಂಡ. ಲಾರಿಯವ ಅಂಥಾ ಏನೂ ಆಸಕ್ತಿ ತೋರಲಿಲ್ಲ. ಇದೂ ಯಾಕೋ ಡೌಟ್ ಕೇಸೇ ಎಂದುಕೊಂಡು ಸುಮ್ಮನಾದೆ.
ಚಾಲಕ, ಕ್ಲೀನರ್ ಇಬ್ಬರೂ ತಮ್ಮ ಲಾರಿಯಲ್ಲಿದ್ದ ಕ್ಯಾನ್ನಿಂದ ನೀರು ತೆಗೆದು ಮುಖ ತೊಳೆದುಕೊಂಡು ಲಾರಿ ಏರಿ ಕುಳಿತರು.
ಚಾಲಕ ಕ್ಲೀನರ್ ಬಳಿ ಏನೋ ಮಾತನಾಡಿ, ನನ್ನೆಡೆಗೆ ತಿರುಗಿ ಲಾರಿ ಹತ್ತಲು ಸೂಚಿಸಿದ. ಬದುಕಿದೆಯಾ ಬಡಜೀವವೇ! ಎಂದುಕೊಂಡು ತೂಕದ ಬ್ಯಾಗನ್ನು ಕ್ಯಾಬಿನ್ನೊಳಗೆ ಹಾಕಿ ಹತ್ತಿ ಕುಳಿತೆ. ಲಾರಿ ಪ್ರಯಾಣ ಮುಂದುವರಿಸಿತು.
ಕ್ಲೀನರ್ ಬಳಿ ನಾನು ಮಾರನಹಳ್ಳಿ ಬಸ್ಸ್ಟಾಪ್ನಲ್ಲಿ ಇಳಿಯಬೇಕೆಂದು ತಿಳಿಸಿದೆ. ಅವನು ಡ್ರೈವರ್ನ ಬಳಿ ನನಗೆ ಸರಿಯಾಗಿ ತಿಳಿಯದ ಭಾಷೆಯಲ್ಲಿ ಏನೋ ಹೇಳಿದ. ಮಂಜಿನಲ್ಲಿ ಮುಚ್ಚಿಹೋಗಿದ್ದ ಮುಂಜಾವಿನ ನೀರವತೆಯನ್ನು ಸೀಳುತ್ತಾ ಮುಂದೆ ಸಾಗುತ್ತಿದ್ದ ಹೆಡ್ಲೈಟ್ನ ಬೆಳಕಿನಲ್ಲಿ ನಿರಂತರವಾಗಿ ಮೈಚಾಚಿ ಮಲಗಿದ್ದ ರಸ್ತೆಯನ್ನೇ ನೋಡುತ್ತಾ, ಮಾರನಹಳ್ಳಿ ಬರುವುದನ್ನೇ ಅಥವಾ ನಾವು ಮಾರನಹಳ್ಳಿಯನ್ನು ತಲುಪುವುದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದೆ.
ಮುಂದುವರೆಯುತ್ತದೆ…….

