ಅಷ್ಟರಲ್ಲಿ ನನ್ನ ತಮ್ಮ ಪಾಪಣ್ಣ, “ಜಬ್ಬಾ, ಅಲ್ನೋಡು!” ಎಂದು ಜೋರಾಗಿ ಕೂಗಿದ. ಹಳ್ಳದಲ್ಲಿ ನೀರು ಹರಿದಂತೆಲ್ಲಾ, ಹಳ್ಳದ ಉದ್ದಕ್ಕೂ ಅಸಂಖ್ಯಾತ ಕಲ್ಲೇಡಿಗಳು ನಮ್ಮೆಡೆಗೆ ಧಾವಿಸಿ ಬರುತ್ತಿದ್ದವು. ನೀರಿಗೆ ಸೇರಿದ ಆಮೆಯ ರಕ್ತದ ವಾಸನೆಯ ಆಕರ್ಷಣೆಗೆ ಒಳಗಾಗಿ, ಕಲ್ಲುಗಳ ಸಂದಿಗಳಲ್ಲಿ, ಸೆತ್ತೆಯ ಅಡಿಯಲ್ಲಿ ವಾಸವಾಗಿದ್ದ ನೂರಾರು ಕಲ್ಲೇಡಿಗಳು ಒಂದರ ಮೇಲೊಂದು ಬಿದ್ದು, ಅಡ್ಡಾದಿಡ್ಡಿಯಾಗಿ ವಿಚಿತ್ರ ರೀತಿಯಲ್ಲಿ ಚಲಿಸುತ್ತಾ ಆಮೆಯ ಮಾಂಸವನ್ನು ಭಕ್ಷಿಸಲು ಕಾತರಿಸುತ್ತಿದ್ದವು.
ಹಳ್ಳದುದ್ದಕ್ಕೂ ಕಾಣಿಸಿಕೊಂಡ ಅಪಾರ ಪ್ರಮಾಣದ ಕಲ್ಲೇಡಿಗಳನ್ನು ಕಂಡ ಜಬ್ಬ, ಡಬಲ್ ಧಮಾಕಾ ಲಾಟರಿ ಹೊಡೆದವನಂತೆ, “ಅಣ್ಣಯ್ಯರೇ, ಹಿಡ್ಕೊಳ್ಳಿ! ಹಿಡ್ಕೊಳ್ಳಿ!” ಎಂದು ಕೂಗುತ್ತಾ, ಕವಚ ತೆಗೆದ ಮಾಂಸದ ಮುದ್ದೆಗೆ ನಾಲ್ಕು ಕಾಲುಗಳನ್ನು ಜೋಡಿಸಿದಂತಿದ್ದ ಆಮೆಯ ಕಳೇಬರವನ್ನು ನನ್ನ ಕೈಗೆ ವರ್ಗಾಯಿಸಿಯೇಬಿಟ್ಟಿದ್ದ.
ನಾನೂ ಅದನ್ನು ಸಹಜವೆಂಬಂತೆ ಆ ಗಡಿಬಿಡಿಯಲ್ಲಿ ಕೈಗೆ ತೆಗೆದುಕೊಂಡಿದ್ದೆ. ಆದರೆ, ನನ್ನ ಕೈಯಲ್ಲಿರುವುದೇನು ಎಂಬುದು ಅರಿವಾದೊಡನೆಯೇ ಗಾಬರಿಗೊಂಡು, ಆಮೆಯ ಮೃತದೇಹವನ್ನು ಹಾಗೆಯೇ ನೆಲಕ್ಕೆ ಬೀಳಿಸಿದೆ. “ಅಯ್ಯೋ, ಇದೇನಿದು?” ಎಂದವನೇ, ವಾಪಸ್ ಓಡಿಬಂದು ಮರಳಿನ ಮೇಲೆ ತೊಪ್ಪೆಯಂತೆ ಬಿದ್ದಿದ್ದ ಆ ಮಾಂಸದ ಮುದ್ದೆಯನ್ನು ಒಂದು ಚೀಲದೊಳಗೆ ಹಾಕಿದ. ಪಕ್ಕದಲ್ಲಿದ್ದ ಗಿಡವೊಂದರ ಕೊಂಬೆಯೊಂದನ್ನು ಕತ್ತಿಯಿಂದ ಕತ್ತರಿಸಿ, ಚೀಲವನ್ನು ಆ ಕೊಂಬೆಯ ಕೊಕ್ಕೆಗೆ ತೂಗುಹಾಕಿದ. ನಂತರ, ಬಿಟ್ಟರೆ ಕೆಟ್ಟೆ ಎಂಬಂತೆ, ಕೈ ಹಾಕಿದೆಡೆಯಲ್ಲೆಲ್ಲಾ ಸಿಗುತ್ತಿದ್ದ ಏಡಿಗಳನ್ನು ಹಿಡಿಯತೊಡಗಿದ. ಅವುಗಳ ಕೊಂಬು, ಕುರ್ಜಲುಗಳನ್ನು ರ್ಕರ್ಕನೆ ಮುರಿದು ಚೀಲಕ್ಕೆ ತುಂಬಿಸತೊಡಗಿದ.
ಸುತ್ತಲೂ ಹರಿದಾಡುತ್ತಿದ್ದ ಅಸಂಖ್ಯಾತ ಏಡಿಗಳನ್ನು ಕಂಡು, ನಮ್ಮತ್ತ ತಿರುಗಿ ನೋಡುವುದಕ್ಕೂ ಸಮಯವಿಲ್ಲದಂತೆ, ಸುಮಾರು ಅರ್ಧ ಗಂಟೆಯಲ್ಲೇ ನಿರಾಯಾಸವಾಗಿ ಒಂದು ಕೊಡ ತುಂಬ ಏಡಿಗಳನ್ನು ಹಿಡಿದು ತುಂಬಿಸಿಬಿಟ್ಟ. ಆದರೂ, ಇನ್ನೂ ಅಪಾರ ಪ್ರಮಾಣದ ಏಡಿಗಳು ಹಳ್ಳದಲ್ಲಿ ನಮ್ಮ ಕಣ್ಣೆದುರಿಗೇ ಹರಿದಾಡುತ್ತಿದ್ದವು.
ಕಲ್ಲೇಡಿಗಳಿಂದ ತುಂಬಿದ್ದ ಕೊಡ ಹಾಗೂ ಆಮೆಯ ಮಾಂಸದ ಮುದ್ದೆಯನ್ನು ಹೊತ್ತುಕೊಂಡು ಬರುತ್ತಿದ್ದ ಜಬ್ಬನನ್ನು, ಬಹುದಿನಗಳಿಂದ ಕೇಳಬೇಕೆಂದುಕೊಂಡಿದ್ದ ಪ್ರಶ್ನೆಯೊಂದನ್ನು ಕೇಳಿದೆ.
“ಅಲ್ಲಾ ಮಾರಾಯಾ, ನಿನ್ನ ಹೆಸರನ್ನು ಯಾರಿಟ್ಟಿದ್ದು ಜಬ್ಬ ಅಂತ?” ಎಂದು ಕೇಳಿದೆ.
“ನಮ್ಮ ಕಡೆ ಅದೇ ತರದ ಹೆಸರು ಇಡೋದು ಅಣ್ಣಯ್ಯರೇ. ದೂಜ, ಕೂರ, ಮತೋಡಿ ಅಂತ. ಅಯ್ಯನೋರಿಗೋ, ಭಟ್ಟರಿಗೋ, ತೋಟದ ಸಾವ್ಕರ್ರಿಗೋ ಕೇಳಿದ್ರೆ, ಅವರು ನಮಗೆ ಹೇಳೋದೇ ಇಂಥ ಹೆಸರುಗಳನ್ನು. ಇದಕ್ಕಿಂತ ಉತ್ತಮವಾದ ಹೆಸರುಗಳು ಅಂದ್ರೆ ಕುಜುಮ, ಮಾಟ, ದೊಂಕ, ಮೊಗ, ಮುಂಡೇಡಿ… ಬರೀ ಇದೇನಾ! ನಮ್ಮನ್ನೆಲ್ಲಾ ನೋಡಿದ್ರೆ, ನಾವೆಲ್ಲಾ ಇಂಥ ಹೆಸರಿಗೆ ಸರಿಯಾದವರು ಅನ್ಸುತ್ತೋ ಏನೋ? ಈ ಉತ್ತಮರಿಗೆ, ಇವರ ಮನೆ ಮಕ್ಕಳಿಗೆ ಮಾತ್ರ ಶ್ರೀನಿವಾಸಮೂರ್ತಿ, ಶಂಕರ, ವಿಷ್ಣುಪ್ರಸಾದ, ನಾರಾಯಣ, ದಿನಕರ, ಬಸವರಾಜ… ಎಂಥಾ ಮನುಷ್ಯರಪ್ಪಾ! ಬಿಡಿ, ಈಗ ಆಗೋಯ್ತಲ್ಲಾ!”
“ಇವರುಗಳು ಮಾತ್ರ ಮೂರ್ತಿ, ಪ್ರಸಾದ; ನಾವೆಲ್ಲಾ ಹಿಕ್ಕೆ ಮಾತ್ರನಾ? ಹೆಸರಿಡುವ ಮೂಲದಲ್ಲೇ ನಮಗೆ ಬತ್ತಿಯಿಡೋರು, ಜೀವನಪರ್ಯಂತ ಆ ಹೆಸರಿನ ನೆಪದಲ್ಲಿ ಕೀಳರಿಮೆಯಿಂದ ಬದುಕುವಂತೆ ಮಾಡ್ತಾರೆ. ನಾವೆಲ್ಲಾದ್ರೂ ಬಸವರಾಜ ಅಂತ ಹೆಸರಿಟ್ಟುಕೊಂಡ್ರೆ, ಅದನ್ನೂ ಬಾಸ್ ಮಾಡ್ತಾರೆ. ದೇವರಾಜನನ್ನು ದ್ಯಾವ ಅಂತಾರೆ, ಸುಬ್ರಮಣಿಯನ್ನು ಸುಬ್ಬ ಅಂತ ಮಾಡ್ತಾರೆ. ಸ್ವಲ್ಪ ಒಗೆದು, ತೊಳೆದು, ಇಸ್ತ್ರಿ ಮಾಡಿ ಬಟ್ಟೆ ಹಾಕಿಕೊಂಡರೂ ಅಷ್ಟೇ. ಕ್ರಾಪ್ ಕಟಿಂಗ್ ಮಾಡಿಸಿಕೊಂಡ್ರೆ, ಒಂದಷ್ಟು ಬೆಲೆಬಾಳುವ ಚಪ್ಪಲಿ ಹಾಕಿಕೊಂಡರೂ, ಗಂಟಲೊಳಗೇ ‘ಉಂ! ಉಂ!’ ಅಂತ ದನಿ ತೆಗೆದು, ಗರ್ಗರ್ ಅಂತ ಗೊಣಗಾಡಿ ಸುಮ್ಮನಾಗ್ತಾರೆ.
ನಮ್ಮ ಮಕ್ಕಳು ಹುಟ್ಟಿರೋದೇ ನಮ್ಮಂಗೆ ಇರ್ಮನೆ ಜೀತ ಮಾಡೋಕ್ಕೇಂತ ಅಂದುಕೊಂಡಿದ್ದಾರೆ. ಇಸ್ಕೂಲಿಗೆ ಹೋಗಬಾರದು. ಹೋಗಿ ಕೆಲಸಕ್ಕೆ ಸೇರಿಕೊಂಡುಬಿಟ್ರೆ, ಇರ್ಮನೆ ಚಿಗುರು, ಅಗತೆ, ಗೊಬ್ಬರ, ಹಳು, ಕಳೆಗೆ ಜನ ಕಡಿಮೆಯಾಗ್ತಾರಲ್ಲಾ!” ಎಂದು ಶತಶತಮಾನಗಳ ಆಕ್ರೋಶವನ್ನು ಹೊರಹಾಕಲು ಕಾದಿದ್ದನೇನೋ ಎಂಬಂತೆ ಜಬ್ಬ ತನ್ನೊಳಗಿನ ಸಿಟ್ಟನ್ನೆಲ್ಲಾ ಹೊರಚೆಲ್ಲಿದ್ದ.
ಮುಂದುವರಿಯುತ್ತದೆ
ಧನಂಜಯ ಜೀವಾಳ ಬಿ.ಕೆ.
