ಶ್ಲೋಕ – 18
ಸತ್ ಕಾರಮಾನಪೂಜಾರ್ಥಂ ತಪೋ ಡಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥೧೮॥
ಸತ್ ಕಾರ ಮಾನ ಪೂಜಾ ಅರ್ಥಂ ತಪಃ ಡಂಭೇನ ಚ ಏವ ಯತ್ ।
ಕ್ರಿಯತೇ ತತ್ ಇಹ ಪ್ರೋಕ್ತಮ್ ರಾಜಸಂ ಚಲಮ್ ಅಧ್ರುವಮ್ – ಮನ್ನಣೆ, ಹೊಗಳಿಕೆ ಮತ್ತು ಗೌರವಗಳಿಗಾಗಿ ಬೂಟಾಟಿಕೆಯಿಂದ ಆಚರಿಸುವ, ನೆಲೆ ಇಲ್ಲದ, ಬಾಳಿಕೆಯಿಲ್ಲದ ತಪಸ್ಸು ರಾಜಸ ಎನ್ನಿಸುತ್ತದೆ.
ಭಗವಂತನ ಅನುಸಂಧಾನವಿಲ್ಲದೆ, ತನಗೆ ಜನ ಸತ್ಕಾರ ಮಾಡಲಿ ಎಂದು ಸನ್ಮಾನದ ಆಸೆಯಿಂದ ಮಾಡುವ ಎಲ್ಲ ತಪಸ್ಸು ರಾಜಸ ತಪಸ್ಸು. ಈ ರೀತಿ ಡಂಭಾಚಾರದಿಂದ ಮಾಡುವ ತಪಸ್ಸು ಪರಲೋಕಕ್ಕೆ ಸಲ್ಲುವುದಿಲ್ಲ. ಚಪಲದಿಂದ ಮಾಡಿದ ಇಂಥಹ ಕಾರ್ಯದ ಫಲ ಇಹದಲ್ಲೂ ಶಾಶ್ವತವಲ್ಲ.
ಈ ಶ್ಲೋಕದಲ್ಲಿ ಏವ ಮತ್ತು ಚ-ಕಾರ ಒಟ್ಟಿಗೆ ಬಂದಿದೆ. ಇದು ನಮಗೆ ವಿಶೇಷ ಸಂದೇಶವನ್ನು ಕೊಡುತ್ತದೆ. ಸತ್ಕಾರಕ್ಕಾಗಿಯೂ, ಮಾನಕ್ಕಾಗಿಯೂ, ಡಂಭಕ್ಕಾಗಿಯೂ ಮಾಡುವ ಕ್ರಿಯೆ ರಾಜಸ ಎನಿಸಿದರೆ ; ಭಗವದರ್ಪಣ ಬುದ್ಧಿಯಿಂದ ಮಾಡಿ ಬಯಸದೇ ಸತ್ಕಾರ ಬಂದರೆ, ನಾಲ್ಕು ಜನರಿಗೆ ತಿಳುವಳಿಕೆ ಬರಲಿ ಎಂದು ಜ್ಞಾನ ದಾನದ ಭಾವನೆಯಿಂದ ಪ್ರಚಾರ ಮಾಡಿದರೆ-ಅದು ರಾಜಸವಾಗುವುದಿಲ್ಲ. ಇದನ್ನು ತಿಳಿಸುವುದಕ್ಕೋಸ್ಕರ ಇಲ್ಲಿ ಚ ಮತ್ತು ಎವಕಾರ ಬಳಸಲಾಗಿದೆ.
