ಹಾಸನ, ಜೂನ್ 21: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ರೋಟರಿ ಕ್ಲಬ್ ಹಾಸನ್ ಸನ್ ರೈಸ್, ಯೋಗ ಚೇತನ ಕೇಂದ್ರ ಅಡಗೂರು ಹಾಗೂ ಶ್ರೀ ವರಸಿದ್ಧಿ ವಿನಾಯಕ ಯೋಗ ಕೇಂದ್ರ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 16 ದಿನಗಳ ಯೋಗ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಜೂನ್ 5ರಿಂದ ಜೂನ್ 21ರವರೆಗೆ ಯೋಗ ಗುರು ಶ್ರೀ ಚೇತನ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಆರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ನೀಡಲಾಯಿತು. ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿ ಯೋಗಾಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಅಗತ್ಯವಾದ ಮಾರ್ಗದರ್ಶನವನ್ನು ಪಡೆದರು.
ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ವಿಶೇಷ ಧ್ಯಾನ ಕಾರ್ಯಕ್ರಮದೊಂದಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಕೆ.ಎಸ್. ಯೋಗೇಶ್, ನಿರ್ದೇಶಕರಾದ ರೋ. ವಿಶ್ವನಾಥ್, ರೋ. ರಾಜೇಶ್ ಹಾಗೂ ರೋ. ಕರುಣೇಶ್, ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಅರ್ಚಕ ಮಧು ಶರ್ಮ, ಪ್ರಮುಖರಾದ ಪ್ರಕಾಶ್ ಯಾಜಿ, ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಯೋಗವು ಆರೋಗ್ಯಕರ ಮತ್ತು ಸಮತೋಲನಯುತ ಜೀವನಕ್ಕೆ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂತಹ ಶಿಬಿರಗಳು ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ಸಮಾರೋಪದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ, ಮಾನಸಿಕ ನೆಮ್ಮದಿ ಹಾಗೂ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು.
ಸುಮಾರು 16 ದಿನಗಳ ಕಾಲ ನಿರಂತರವಾಗಿ ನಡೆದ ಯೋಗ ಶಿಬಿರವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳು, ಗಣ್ಯರು ಹಾಗೂ ಶಿಬಿರಾರ್ಥಿಗಳಿಗೆ ಟೀಮ್ ಸನ್ ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
