ಕೊರಟಗೆರೆ, ಜೂ. 21: ಮನುಷ್ಯನ ಬದುಕಿನಲ್ಲಿ ಧರ್ಮ ಪರಿಪಾಲನೆ ಅತ್ಯಂತ ಮಹತ್ವದ್ದಾಗಿದ್ದು, ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವೇ ಜನರ ನಿಜವಾದ ಆಸ್ತಿ ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸುಂದರ ಉಡುಗೆ ವ್ಯಕ್ತಿತ್ವವನ್ನು ಬದಲಾಯಿಸಬಹುದು. ಆದರೆ ಬದುಕನ್ನು ಬದಲಾಯಿಸುವುದು ಸಂಸ್ಕಾರ ಮತ್ತು ಸರಳತೆ ಮಾತ್ರ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿರುವುದು ಆತಂಕದ ವಿಷಯ. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ 50 ವರ್ಷಗಳಲ್ಲಿ ಆಗಬೇಕಾದ ಸಾಧನೆಯನ್ನು ಕೇವಲ 20 ವರ್ಷಗಳಲ್ಲಿ ಸಾಧಿಸಿ ಭಕ್ತರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ” ಎಂದು ಪ್ರಶಂಸಿಸಿದರು.

ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. “ಭಕ್ತ ಸಮೂಹವೇ ಶ್ರೀಮಠದ ಶಕ್ತಿ. ಮಠಕ್ಕೆ ಸೇವೆ ಸಲ್ಲಿಸಿದ ಭಕ್ತರನ್ನು ಗುರುಸೇವಾ ರತ್ನ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ. ಶ್ರೀಮಠ ಮತ್ತು ಭಕ್ತರ ನಡುವಿನ ಆತ್ಮೀಯ ಬಾಂಧವ್ಯವೇ ವಾರ್ಷಿಕೋತ್ಸವದ ಉದ್ದೇಶ” ಎಂದು ತಿಳಿಸಿದರು.

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸಿದ್ದರಬೆಟ್ಟ ಶ್ರೀಮಠದ 20ನೇ ವರ್ಷದ ವಾರ್ಷಿಕೋತ್ಸವ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಕಾರ್ಯಕ್ರಮವಾಗಿದೆ. ಶ್ರೀಕ್ಷೇತ್ರದ ಪ್ರತಿಯೊಂದು ಗಿಡವೂ ಔಷಧೀಯ ಗುಣಗಳನ್ನು ಹೊಂದಿದ್ದು, ಸ್ವಾಮೀಜಿಗಳ ಪರಿಸರಪರ ಹಾಗೂ ಜನಪರ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಸಮಾರಂಭದಲ್ಲಿ ಹಿರೇಮಠದ ರೇವಣ್ಣಸಿದ್ದೇಶ್ವರ ಶಿವಾಚಾರ್ಯರು, ತಂಗನಹಳ್ಳಿಯ ಬಸವಮಹಾಲಿಂಗ ಸ್ವಾಮೀಜಿ, ಚಿಕ್ಕತೊಟ್ಲುಕೆರೆಯ ಮಲ್ಲಿಕಾರ್ಜುನ ಸ್ವಾಮೀಜಿ, ತೆಗ್ಗಿಹಳ್ಳಿಯ ರಮಾನಂದ ಸ್ವಾಮೀಜಿ, ತಮ್ಮಡಿಹಳ್ಳಿಯ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
20 ಉಚಿತ ಸಾಮೂಹಿಕ ವಿವಾಹ..
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 20ಯುವ ಜೋಡಿಗಳಿಗೆ ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಾಡಿಲಾಯಿತು. ಶ್ರೀಮಠದ 20ಜನ ಭಕ್ತರಿಗೆ ವಿಶೇಷ ಗುರುರಕ್ಷೆಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವಿರೇಂದ್ರ ಹೆಗ್ಗಡೆ ಅವರು ಅನಾರೋಗ್ಯ ಪ್ರಯುಕ್ತ ಸಮಾರಂಭಕ್ಕೆ ಗೈರಾದ ಹಿನ್ನಲೆ ಧರ್ಮಸ್ಥಳಕ್ಕೆ ತೆರಳಿ ಸಿದ್ದಶ್ರೀ ಪ್ರಶಸ್ತಿ ನೀಡುವುದಾಗಿ ಶ್ರೀಗಳು ತಿಳಿಸಿದರು.
ಗಮನ ಸೆಳೆದ ಪುಸ್ತಕ ದಾಸೋಹ..
ಸಿದ್ದರಬೆಟ್ಟ ಶ್ರೀಮಠದಿಂದ ಭಕ್ತರಿಗಾಗಿಯೇ ವಿಶೇಷವಾಗಿ 10ಸಾವಿರ ಪುಸ್ತಕ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಬ್ಬ ಭಕ್ತ 1ಪುಸ್ತಕ ತಂದರೇ 2ಪುಸ್ತಕ ತೆಗೆದುಕೊಂಡು ಹೊಗಲು ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಪರಿಸರ ರಕ್ಷಣೆಗಾಗಿ ಶ್ರೀಮಠದಿಂದ ಭಕ್ತರಿಗೆ 5ಸಾವಿರ ಗಿಡಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಶ್ರೀಮಠದಲ್ಲಿ ಹತ್ತಾರು ಕಾರ್ಯಕ್ರಮ..
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸಿದ್ದರಬೆಟ್ಟ ಶ್ರೀಮಠದಲ್ಲಿ ಅಷ್ಟಲಕ್ಷ್ಮೀ ಪೂಜೆಯನ್ನು ಏರ್ಪಡಿಸಲಾಗಿತ್ತು. 120ಕ್ಕೂ ಅಧಿಕ ಯುವ ಭಕ್ತರಿಗೆ ಸಾಮೂಹಿಕ ದೀಕ್ಷೆ ನಡೆಯಿತು. ಸಿದ್ದೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಹಾಗೂ ಜಗದ್ಗುರು ರೇಣುಕಾಚಾರ್ಯರು ಮತ್ತು ಸಿದ್ದೇಶ್ವರ ಸ್ವಾಮಿಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಿದವು.
ಯೋಗ ಬದುಕಿನ ಅವಿಭಾಜ್ಯ ಅಂಗ..
ಋಷಿಮುನಿ ಮತ್ತು ಆಚಾರ್ಯರು ಯೋಗ ಸಾಧನೆಯಿಂದ ಜೀವ ಜಗತ್ತಿಗೆ ಅಮೂಲ್ಯ ಸಂದೇಶ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಯೋಗ ಸಾಧನೆಗೆ ಬಹಳ ಪ್ರಾಮುಖ್ಯತೆ ಇದೆ. ಮನುಷ್ಯನ ದೇಹ, ಮನಸ್ಸು ಮತ್ತು ಭಾವನೆಯನ್ನ ಆರೋಗ್ಯವಾಗಿ ಇಡುವಲ್ಲಿ ಯೋಗ ಮಹತ್ವದ ಸ್ಥಾನ ಪಡೆದಿದೆ. ಮನುಷ್ಯನಿಗೆ ಹಣ, ಆಸ್ತಿಗಿಂದ ಆರೋಗ್ಯವೇ ದೊಡ್ಡದು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಯುವ ಘಟಕದ ಅಧ್ಯಕ್ಷ ಡಾ. ಕೆ.ಎಲ್. ದರ್ಶನ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಹಾಗೂ ವಿವಿಧ ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.

ಸಿದ್ದರಬೆಟ್ಟದಲ್ಲಿ ಶ್ರೀಗಳ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯು ಅನನ್ಯ. ಶಾಶ್ವತ ದಾಸೋಹಕ್ಕೆ ಈಗಾಗಲೇ ಶ್ರೀಮಠಕ್ಕೆ 1ಲಕ್ಷ ನೀಡಿದ್ದೇನೆ. ಸಿದ್ದರಬೇಟ್ಟ ಶ್ರೀಕ್ಷೇತ್ರದಲ್ಲಿ ಶ್ರೀಮಠದ ಭಕ್ತನಾಗಿ ಕಲ್ಯಾಣ ಮಂಟಪ ಕಟ್ಟಿಕೋಡುವ ಜವಾಬ್ದಾರಿ ನನ್ನದು. 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು , ಬಡ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಶ್ರೀ ಮಠದ ಮಹದಾಶೆಯಂತೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿಸಲಾಗುವುದು.
– ಪಿ.ಎನ್.ಕೃಷ್ಣಮೂರ್ತಿ. ಮಾಜಿ ಜಿಪಂ ಸದಸ್ಯ. ಕೊರಟಗೆರೆ
ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ 20ವರ್ಷದಿಂದ ಧಾರ್ಮಿಕ ಕ್ಷೇತ್ರವಲ್ಲದೇ ಕೃಷಿ ಕ್ಷೇತ್ರದಲ್ಲೂ ಶ್ರೀಗಳ ಸಾಧನೆ ಅನನ್ಯ. ಪ್ರತಿತಿಂಗಳು ನಡೆಯುವ ಬೆಳದಿಂಗಳ ಕೂಟವು ಸ್ಥಳೀಯ ರೈತರಿಗೆ ವರದಾನ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನವಜೋಡಿಗಳಿಗೆ ಶುಭವಾಗ್ಲಿ.
– ಮಹಾಲಿಂಗಪ್ಪ.ಹೆಚ್.ಕೆ. ಹಿರಿಯ ಕಾಂಗ್ರೇಸ್ ಮುಖಂಡರು. ಕೊರಟಗೆರೆ
ಸಿದ್ದರಬೆಟ್ಟ ಶ್ರೀಗಳು ಶ್ರೀಮಠ ಕಟ್ಟುವ ಬದಲಾಗಿ ಭಕ್ತರ ಮನಸ್ಸು ಕಟ್ಟಿದ್ದಾರೆ. ಸಿದ್ದರಬೇಟ್ಟ ಶ್ರೀ
ಮಠವು 20ವರ್ಷದ ಅವಧಿಯಲ್ಲಿ ಜಾತಿಬೇದ ಮತ್ತು ವರ್ಣಬೇದ ಇಲ್ಲದೇ ರಾಷ್ಟ್ರ ಮಟ್ಟಕ್ಕೆ ಬೆಳೆದಿದೆ. ಶ್ರೀಕ್ಷೇತ್ರದಲ್ಲಿ 108ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಭಕ್ತರ ಸಹಕಾರ ಅತ್ಯಗತ್ಯ.
– ಡಾ.ಹನುಮಂತನಾಥ ಸ್ವಾಮೀಜಿ. ಪೀಠಾಧ್ಯಕ್ಷರು. ಎಲೆರಾಂಪುರ ಶ್ರೀಕ್ಷೇತ್ರ.
ಬಾಳೆಹೊನ್ನೂರು ಜಗದ್ಗುರುಗಳ ಆರ್ಶಿವಾದ ಮತ್ತು ಶ್ರೀರಕ್ಷೆಯೇ ಸಿದ್ದರಬೆಟ್ಟ ಕ್ಷೇತ್ರವು ಬೆಳೆಯಲು ಕಾರಣ. ಸ್ವಾಮೀಜಿಗಳ ಹತ್ತಾರು ಸಮಾಜಸೇವೆ ಕಾರ್ಯಕ್ರಮಗಳೇ ಇವತ್ತಿನ ಭಕ್ತಸಾಗರದ ಸಾಕ್ಷಿ. ಮೊಬೈಲ್ ಕಡಿತ ಮಾಡಲು ಪುಸ್ತಕ ಮೆರವಣಿಗೆ ಕಾರ್ಯಕ್ರಮವೇ ಹೆಮ್ಮೆ.
– ಶ್ರೀಕಾರದ ವೀರಬಸವ ಸ್ವಾಮೀಜಿ. ಪೀಠಾಧ್ಯಕ್ಷರು. ಬೆಳ್ಳಾವಿ
ಶ್ರೀಮಠಕ್ಕೆ ಆಸರೆಯಾದ ಭಕ್ತರನ್ನು ಸ್ಮರಿಸುವ ಕಾರ್ಯಕ್ರಮವೇ ವಾರ್ಷಿಕೋತ್ಸವ. ಸಿದ್ದರಬೇಟ್ಟದ ಶ್ರೀಗಳ ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆ ಬಹುದೊಡ್ಡದಾಗಿದೆ. ಕಲಿಯುಗ ಮತ್ತು ಆಧುನಿಕ ತಂತ್ರಜ್ಞಾನದ ಮನುಷ್ಯನ ಜೀವನಕ್ಕೆ ಯೋಗ ಅತ್ಯಂತ ಸಹಕಾರಿ.
– ಗುರುನಾಗಭೂಷಣ ಶಿವಚಾರ್ಯ ಸ್ವಾಮೀಜಿ. ಪೀಠಾಧ್ಯಕ್ಷರು. ಮಳಲಿಮಠ.
