ಹಾಸನ : ಪತ್ರಕರ್ತ ಹಾಗೂ ಲೇಖಕ ಜಿ ಪ್ರಕಾಶ್ ಅವರ ನನ್ಸಿರಿ ಕಾದಂಬರಿ ನಿಸ್ವಾರ್ಥ ಪ್ರೀತಿಯ ಪ್ರತೀಕವಾಗಿದೆ ಹಾಗೂ ಮಾನವ ಬದುಕಿನ ಸಾಮಾಜಿಕ ವ್ಯವಸ್ಥೆಯ ಕೈಕನ್ನಡಿಯಾಗಿದೆ ಎಂದು ಮಲ್ನಾಡ್ ನರ್ಸಿಂಗ್ ಹೋಂನ ಖ್ಯಾತ ವೈದ್ಯೆ ಡಾ. ಎ. ಸಾವಿತ್ರಿ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹಾಸನ ವತಿಯಿಂದ ಕವಯಿತ್ರಿ ಸಿಎನ್ ನೀಲಾವತಿ ಪ್ರಾಯೋಜಕತ್ವದಲ್ಲಿ ರಿಂಗ್ ರಸ್ತೆಯ ಉಡುಪಿ ಹೋಟೆಲ್ ಮೊದಲ ಮಹಡಿಯಲ್ಲಿ ಹಮ್ಮಿಕೊಂಡಿದ್ದ 44ನೇ ಸಾಹಿತ್ಯ ಪಯಣ ಹೆಜ್ಜೆ ಹಾಗೂ ಪತ್ರಕರ್ತ ಮತ್ತು ಲೇಖಕ ಜಿ ಪ್ರಕಾಶ್ ಅವರ ನನ್ಸಿರಿ ಕಾದಂಬರಿ ವಿಮರ್ಶೆ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿ “ನನ್ಸಿರಿ” ಕಾದಂಬರಿಯಲ್ಲಿ ಬೆಳಕು ಮತ್ತು ಸಿರಿ ನಡುವಿನ ನಿಷ್ಕಲ್ಮಶ ಪ್ರೀತಿಯ ಬಂಧ ಹಾಗೂ ನವೀರಾದ ಪ್ರೇಮ ನಿನಾದ ಬೆಳಕು ಪತ್ನಿ ನಮ್ರತಾ ಪಾತ್ರ ಓದುಗರಿಗರನ್ನು ದ್ವಂದ್ವದಲ್ಲಿ ಸಿಲುಕುವಂತೆ ಮಾಡುತ್ತದೆ ಹಾಗೂ ರಾಧೆ, ಕೃಷ್ಣ ಮತ್ತು ರುಕ್ಮಿಣಿ ಬದುಕನ್ನು ನೆನಪಿಸುತ್ತದೆ. ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಸುಳಿಯಲ್ಲಿ ಬೆಳಕು ಮತ್ತು ಸಿರಿ ಪ್ರೇಮ ಪ್ರಸಂಗ ಹಲವು ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ. ಬಹುತೇಕ ಕೌಟುಂಬಿಕ ವ್ಯವಸ್ಥೆ ಇದಕ್ಕಿಂತ ಭಿನ್ನವಾಗಿಲ್ಲ ಎಂದೆನಿಸದೆ ಇರದು. ಕಾದಂಬರಿಕಾರ ಜಿ. ಪ್ರಕಾಶ್ ಅವರ ಪಾತ್ರ ಸೃಷ್ಟಿ, ಕೌತುಕದ ಕಥಾಹಂದರ ಓದುಗರನ್ನು ಚಿತ್ತಕದಲದಂತೆ ಕೊಂಡೊಯ್ಯುವಲ್ಲಿ ಯಶಸ್ವೀಯಾಗಿದೆ.

“ನನ್ಸಿರಿ” ಕಾದಂಬರಿ ಕೇವಲ ಕೃತಿಯಲ್ಲ. ಇದು ಸಾಮಾಜಿಕ ಕೈಗನ್ನಡಿ. ಸಾಮಾನ್ಯ ಜೀವನದ ಸ್ಥಿತ್ಯಂತರಗಳನ್ನು ಅನಾವರಣಗೊಳಿಸುತ್ತದೆ. ಓರ್ವ ಪತ್ರಕರ್ತರಾಗಿ ಸಮಾಜವನ್ನು ಭಿನ್ನವಾಗಿ ನೋಡುವ ಹಾಗೂ ವಿಮರ್ಶಿಸುವ ಗುಣ ಇರುವದರಿಂದಲೇ ಪ್ರಕಾಶ್ ಅವರಿಂದ ನನ್ಸಿರಿ ಅಂತಹ ಅಮೂಲ್ಯ ಕಾದಂಬರಿ ಹೊರಬರಲು ಸಾಧ್ಯವಾಗಿದೆ. ಈ ಕಾದಂಬರಿ ಓದಿದ ಪ್ರತಿಯೊಬ್ಬ ಸಹೃದಯಿಗೂ ತಮ್ಮ ಅಥವಾ ತಮ್ಮ ಸುತ್ತಮುತ್ತಲು ನಡೆಯುವ ಅನೇಕ ಘಟನೆಗಳನ್ನು ನೆನಪಾಗೆ ತರುವಲ್ಲಿ ಯಶಸ್ವಿಯಾಗಿದೆ. ಪ್ರಕಾಶ್ ರವರ ಸಾಹಿತ್ಯ ಪಯಣ ಇನ್ನು ಉಜ್ವಲವಾಗಿ ಸಾಗಿ ಉತ್ತಮೋತ್ತಮ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಲಿ ಎಂದು ಶುಭ ಕೋರಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಜ.ನಾ. ತೇಜಶ್ರೀ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ತಾಲೂಕು ಅಧ್ಯಕ್ಷೆ ಕೆ. ಸಿ. ಗೀತಾ, ಪ್ರಯೋಜಕರಾದ ಸಿಎನ್ ನೀಲಾವತಿ ಹಾಗೂ ಕಾದಂಬರಿಕಾರ ಜಿಪ್ರಕಾಶ್, ಡಾ . ಕುಶಾಲ್ ಬರಗೂರು, ಕೆ.ಟಿ. ಜಯಶ್ರೀ ಮುಂತಾದವರು ಮಾತನಾಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಗೊರೂರು ಅನಂತರಾಜು, ಪದ್ಮಾವತಿ ವೆಂಕಟೇಶ್, ಭಾರತಿ ಎಚ್. ಎನ್., ಲಕ್ಷ್ಮೀದೇವಿ ದಾಸಪ್ಪ, ಗಿರಿಜಾ ಹಾಸನ, ಲಲಿತಾ ಎಸ್. ಸಕಲೇಶಪುರ, ಸುರೇಶ ಕೊಣನೂರು, ಸಂತೋಷಕುಮಾರಿ, ಕಲ್ಪನಾ , ಚಂದ್ರಶೇಖರ್ ಹಾನಗಲ್, ವಾಣಿ ಮಹೇಶ್, ಧನುಷ್ ಎಂ. ಹೊಸೂರು ಸೇರಿದಂತೆ ಹಲವು ಕವಿಗಳು ಕಾವ್ಯವಾಚನ ಮಾಡಿದರು.
