ಹಾಸನ: ಇಂದು ನಾವು ಮೂವರು ಮಹಾನ್ ಆತ್ಮಗಳಿಗೆ ನುಡಿ ನಮನ ಸಲ್ಲಿಸಲು ಸೇರಿದ್ದೇವೆ . ಒಬ್ಬರು ಸ್ವರಲೋಕದ ಕೋಗಿಲೆ,ಇನ್ನೊಬ್ಬರು ತ್ಯಾಗ ಮತ್ತು ಸರಳತೆಯ ಪ್ರತೀಕವಾದವರು , ಮತ್ತೊಬ್ಬರು ನಾಡಿನ ಚಿಂತನೆಯ ಬೆಳಕು. ಅವರ ದೈಹಿಕ ಅಗಲಿಕೆ ನಮಗೆ ನೋವು ತಂದರೂ ಅವರ ಬದುಕು ಮತ್ತು ಕೊಡುಗೆ ನಮಗೆ ದಾರಿದೀಪ ವಾಗಿದೆ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ ಅಭಿಪ್ರಾಯಪಟ್ಟರು.
ಎಸ್ ಎಂ ಕೃಷ್ಣ ನಗರದಲ್ಲಿ ಚುಟುಕು ಸಾಹಿತ್ಯ ಪರಿಷತ್ತು, ಎಸ್ ಎಂ ಕೃಷ್ಣನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಸ್ ಎಂ ಕೃಷ್ಣ ನಗರದ ಕಲಾವಿದರ ಸಂಘ ಏರ್ಪಡಿಸಿದ್ದ ನುಡಿ ನಮನ, ಗೀತಗಾಯನ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡುತ್ತಾ ಎಸ್ ಜಾನಕಿ ಅವರು ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್, ರಾಜಕುಮಾರ್, ಘಂಟಸಾಲ ಅವರೊಂದಿಗೆ ಹಾಡಿದ ಯುಗಳಗೀತೆಗಳು ಇಂದಿಗೂ ನಮ್ಮ ಮನೆ ಮನಗಳಲ್ಲಿ ಗುಣುಗುತ್ತಿವೆ.ಅವರ ಧ್ವನಿಯಲ್ಲಿ ಮಗುವಿನ ಮುಗ್ಧತೆ ಇತ್ತು,ತಾಯಿಯ ಮಮತೆ ಇತ್ತು , ಪ್ರೇಯಸಿಯ ಪ್ರಣಯವಿತ್ತು.ಪ್ರಶಸ್ತಿ ಪುರಸ್ಕಾರಗಳಿಗಿಂತ ದೊಡ್ಡದಾಗಿ ಅವರು ಜನರ ಹೃದಯದಲ್ಲಿ ನೆಲೆಸಿದ್ದರು.ಸುಮಾರು 48000 ಗೀತೆಗಳನ್ನು ಹಾಡಿರುವ ಇವರು 17 ಭಾಷೆಗಳಲ್ಲಿ ಹಾಡಿದ್ದಾರೆ.

ಚೆನ್ನಮ್ಮ ಅವರು ಎಂದೂ ರಾಜಕೀಯದ ಮುನ್ನೆಲೆಗೆ ಬರಲಿಲ್ಲ. ಆದರೆ ದೇವೇಗೌಡರ 70 ವರ್ಷಗಳ ಸುದೀರ್ಘ ರಾಜಕೀಯ ಏಳು ಬೀಳುಗಳಲ್ಲಿ ಅವರ ಬೆನ್ನೆಲುಬಾಗಿ ನಿಂತರು. ಇವರು ಬದುಕಿದ ರೀತಿ ಆದರ್ಶಪ್ರಾಯವಾಗಿದೆ. ಅಂತರರಾಷ್ಟ್ರೀಯ ಚಿತ್ರ ಕಲಾವಿದರಾದ ಕೆ ಟಿ ಶಿವಪ್ರಸಾದ್ ರವರು ಕೇವಲ ಕಲಾವಿದರಷ್ಟೇ ಅಲ್ಲದೆ ರೈತ ಚಳುವಳಿ,ದಲಿತ ಚಳುವಳಿಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಮಾಜಮುಖಿಯಾಗಿ ಬದುಕಿದರು. ಅರಮನೆಯಲ್ಲಿ ಇರಬೇಕಾದ ಇವರು ನೊಂದವರ ಧ್ವನಿಯಾಗಲು ಕೊನೆಯವರೆಗೂ ಸಾಮಾಜಿಕ ಚಿಂತಕರಾಗಿ ಬದುಕಿ ಶ್ರೇಷ್ಠರೆನಿಸಿಕೊಂಡರು ಎಂದರು.
ತಬಲಾ ವಿಧ್ವಾನ್ ಬೇಲೂರ್ ನಾಗೇಶ್ ಮಾತನ್ನಾಡುತ್ತಾ ಎಸ್ ಜಾನಕಿಯವರು ಸಂಗೀತ ಕ್ಷೇತ್ರದ ಸಾಮ್ರಾಜ್ಞೆಯಾಗಿ ಮಿಂಚಿ ಮರೆಯಾದರು. ಅವರಲ್ಲಿದ್ದ ಭಾಷಾ ಪ್ರೇಮ ಮೆಚ್ಚುವಂತಹದ್ದು ಎಂದು ಅವರೊಟ್ಟಿಗೆ ಕೆಲಸ ಮಾಡಿದ ಕೆಲವೊಂದು ಘಟನೆಗಳನ್ನು ನೆನಪು ಮಾಡಿಕೊಂಡರು.
ಎಸ್ ಎಂ ಕೃಷ್ಣ ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರ್ಮಣ್ಣ ಮಾತನ್ನಾಡುತ್ತಾ ಚೆನ್ನಮ್ಮ ದೇವೇಗೌಡರು ಉತ್ತಮ ಸಮಾಜಸೇವಕರು. ಇವರ ಬಳಿ ಬಂದವರು ಯಾರು ಬರಿಕೈಲಿ ಹಿಂದುರಿಗಿದವರಿಲ್ಲ. ಕೊಡುಗೈ ದಾನಿಗಳಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಚಿತ್ರಕಲಾ ಶಿಕ್ಷಕರ ಸಂಘದ ಹಾಸನ ಜಿಲ್ಲಾ ಅಧ್ಯಕ್ಷ ರವಿ ಮಾತನ್ನಾಡುತ್ತಾ ಕೆ ಟಿ ಶಿವಪ್ರಸಾದ್ ಎಂಜಿನಿಯರ್ ಆಗುವುದನ್ನು ಬಿಟ್ಟು ಕಲಾ ಸರಸ್ವತಿಯ ಸೇವಕರಾಗಿ ಜೀವನ ಸವೆಸಿದರು. ಚಿತ್ರ ಕಲಾ ಪ್ರೇಮಿಗಳ ಆರಾಧಕ ಗುರುವಾದರು ಎಂದರು.

ಗಾಯಕ ಶಿಕ್ಷಕ ವಸಂತ್.ಜಿ.ಬಿ ಕಾರ್ಯಕ್ರಮ ಆಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.ಗಾಯಕರಾದ ಕೆ ಎನ್ ಶಂಕರ್,ವಿಠ್ಠಲ್, ತಪಸ್ವಿಕುಮಾರಿ, ಹರ್ಷಿತ, ಸಾಗರ್, ಮಧು ಇಳೆಗಾರ್, ನಾಗರಾಜ್ ಗಂಡಸಿ, ಅಂತೋನಿ, ಅಲ್ಫನ್ಸ್, ಪಿ ರಮೇಶ್, ಹಾಡಿದರು.
ಕಾರ್ಯಕ್ರಮದಲ್ಲಿ ಕಿರಣ್ ಕೆ ಪಿ ಟಿ ಸಿ ಎಲ್, ಉತ್ತರ ಬಡಾವಣೆಯ ಅಧ್ಯಕ್ಷ ಅಲ್ಫೋನ್ಸೋ,ಶಿಕ್ಷಕ ವಸಂತ ಜಿ ಬಿ, ನಿವೃತ್ತ ಶಿಕ್ಷಕ ಲಕ್ಷ್ಮಪ್ಪ, ನಿವೃತ್ತ ಪಶು ವೈದ್ಯಕೀಯ ಇನ್ಸ್ಪೆಕ್ಟರ್ ನಿಂಗರಾಜ್, ಚಿತ್ರ ಕಲಾವಿದ ಏಕಾಂತ್, ನಾಗೇಶ್ ಬೇಲೂರು ಉಪಸ್ಥಿತರಿದ್ದರು. ಗಾಯಕ ವಸಂತ ಮತ್ತು ತಂಡದಿಂದ ನಡೆದ ಗೀತ ಗಾಯನ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
