ಹಾಸನ: ನೂರಾರು ಜನರ ಜೀವ-ಜೀವನ ವಾಹನ ಚಾಲಕರ ಕೈಯಲ್ಲಿರುತ್ತದೆ ಹಾಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಹೆಚ್ಚಿನ ಸಮಯ ಮೀಸಲಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಾಹನ ಚಾಲಕರುಗಳಿಗೆ ಹೃದಯಾಘಾತ ತಡೆ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಿಗೆ ವಾಹನ ಚಾಲಕರ ಸೇವೆ ಅಗತ್ಯವಿದೆ. ಇತ್ತೀಚಿನ ವರದಿಯ ಪ್ರಕಾರ ಶೇ.100ರಲ್ಲಿ ಶೇ.30 ರಷ್ಟು ಜನ ವಾಹನ ಚಾಲಕರುಗಳು ಹೃದಯಘಾತದಿಂದ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ಮಾನಸಿಕ ಒತ್ತಡದಿಂದ ಕೆಲಸ ಮಾಡುವುದು ಮತ್ತು ವ್ಯಸನಗಳು, ದುಶ್ಚಟಗಳು ಕಾರಣವಾಗಿರಬಹುದು ಆದ್ದರಿಂದ ಅವುಗಳನ್ನು ಬಿಟ್ಟು ಶಿಸ್ತು ಬದ್ಧಜೀವನವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.
ವೈದ್ಯರಿಗಿಂತ ವಾಹನ ಚಾಲಕರು ಮುಖ್ಯ, ಚಾಲಕರು ಆರೋಗ್ಯವಾಗಿದ್ದರೆ ಅವರ ಕುಟುಂಬ, ಸಮಾಜ ಆರೋಗ್ಯವಾಗಿರುತ್ತದೆ. ಮಾನಸಿಕವಾಗಿ ದೈಹಿಕವಾಗಿ ಉತ್ತಮ ಆರೋಗ್ಯವನ್ನು ಇಟ್ಟುಕೊಳ್ಳುವುದೇ ನಿಜವಾದ ಸಾಧನೆಯಾಗಿದೆ ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರಲ್ಲದೆ, ವಾಹನ ಚಾಲಕ ವರ್ಗವನ್ನು ಗುರಿಯಾಗಿಸಿಕೊಂಡು ಅವರ ಜೀವನವನ್ನು ಸುಧಾರಿಸಲು ಜಿಲ್ಲಾಡಳಿತವೆಲ್ಲ ಒಗ್ಗೂಡಿ ಇದೇ ತಿಂಗಳ 30ನೇ ತಾರೀಕಿನಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿದ್ದೇವೆ, ಜೊತೆಗೆ ಸರ್ಕಾರವು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗಳಂತಹ ಅನೇಕ ಯೋಜನೆಗಳನ್ನು ನಿಮ್ಮ ಅನುಕೂಲಕ್ಕೆ ನೀಡಿದೆ ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಬಿ.ಆರ್.ಪೂರ್ಣಿಮಾ ಮಾತನಾಡಿ 45 ನಿಮಿಷದ ನಡಿಗೆ 10 ವರ್ಷದ ಆಯಸ್ಸನ್ನು ಹೆಚ್ಚಿಸುವಂತಹದ್ದಾಗಿದೆ ಹಾಗಾಗಿ ದಿನಕ್ಕೆ ಒಂದು ಗಂಟೆಯಾದರೂ ನಿಮ್ಮ ಆರೋಗ್ಯಕ್ಕಾಗಿ ಮೀಸಲಿಡಿ. ಆರೋಗ್ಯದ ಜೊತೆಗೆ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ನಿದ್ರೆ, ಆಹಾರ, ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಿ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಅನಿಲ್, ಹಿಮ್ಸ್ ನಿರ್ದೇಶಕ ಡಾ||ರಾಜಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಪ್ರಕಾಶ್, ಕೆಎಸ್.ಆರ್.ಟಿ.ಸಿ ಪ್ರಾಂಶುಪಾಲೆ ಗೀತಾಂಜಲಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಕೆ.ಟಿ.ರವಿ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ||ಚೇತನ್, ಆರ್.ಸಿ.ಎಚ್ ಅಧಿಕಾರಿ ಡಾ||ಶಿವಶಂಕರ್, ಜಿಲ್ಲಾಶಸ್ತ್ರಕಿತ್ಸಕರಾದ ಡಾ|| ನಾಗಪ್ಪ, ಡಾ|| ನಾಗೇಶ್ಆರಾಧ್ಯ, ಮಾನಸಿಕ ಮನೋರೋಗ ತಜ್ಞೆ ಡಾ||ಸುನೀತಾ, ಕಾರ್ಲೆ ವೈದ್ಯಾಧಿಕಾರಿ ಡಾ|| ತೇಜಸ್ವಿ ಉಪಸ್ಥಿತರಿದ್ದರು, ವಾಹನ ಚಾಲಕ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ವಾಹನ ಚಾಲಕರುಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಚನ್ನರಾಯಪಟ್ಟಣ ಪುರಸಭಾ ಉಪಾಧ್ಯಕ್ಷೆ ಸ್ಥಾನಕ್ಕೆ ಕವಿತಾರಾಜು ಅವಿರೋಧ ಆಯ್ಕೆ: ಗಾಣಿಗ ಸಮುದಾಯದ ಪ್ರಥಮ ಪ್ರತಿನಿಧಿ
