ಹಾಸನ: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಶಾಂತಲಾ ಗ್ರೂಪ್ ಆರ್ಟ್, ಹಾಸನ ಹಾಗೂ ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಇನ್ಷೂರೆನ್ಸ್ ಪುಟ್ಟೇಗೌಡ ಟ್ರಸ್ಟ್ ಸ್ಮರಣಾರ್ಥ ಹಾಸನ ನಗರದ ಬಸ್ಸ್ಟ್ಯಾಂಡ್ ರಸ್ತೆಯಲ್ಲಿರುವ ಶ್ರೀ ಗಣಪತಿ ಪೆಂಡಾಲ್ನಲ್ಲಿ ಆಯೋಜಿಸಿದ್ದ ‘ಕಾವ್ಯ ಗಾನ ನಾಟ್ಯ ಕುಂಚ’ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಕವಿಗಳು ರಚಿಸಿದ ಕವನಗಳಿಗೆ ಗಾಯಕರು ರಾಗ ಸಂಯೋಜಿಸಿ ಹಾಡಿದರೆ, ಚಿತ್ರಕಲಾವಿದರು ಪ್ರೇಕ್ಷಕರ ಎದುರೇ ಕಾವ್ಯದ ಭಾವನೆ ಹಾಗೂ ಕಲ್ಪನೆಗಳನ್ನು ಕುಂಚದ ಮೂಲಕ ಚಿತ್ರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಕವಿಗಳಾದ ಜಿ. ಮಲ್ಲೇಶ್, ಗೊರೂರು ಅನಂತರಾಜು, ಎಸ್.ಎಸ್. ಪುಟ್ಟೇಗೌಡ, ಜಿ.ಆರ್. ಶ್ರೀಕಾಂತ್, ವೈ.ಬಿ. ಕಾಂತರಾಜು ಹಾಗೂ ಕವಯಿತ್ರಿಯರಾದ ಗಿರಿಜಾಂಬ, ಸುಶೀಲ ಸೋಮಶೇಖರ್, ಸುಶೀಲಾ ಎಸ್., ಕಲಾವತಿ ಮಧುಸೂದನ್ ಅವರ ಕವನಗಳಿಗೆ ರಾಗ ಸಂಯೋಜಿಸಿ ಗಾಯಕರು ಪ್ರಸ್ತುತಪಡಿಸಿದರು.
ಯೋಗೇಂದ್ರ ದುದ್ದ, ಶ್ರೀಕಾಂತ್, ಕಲಾವತಿ ಮಧುಸೂದನ್, ಉಮಾ ವಿಶ್ವನಾಥ್ ಹಾಗೂ ಶೋಭಾ ಹರೀಶ್ ಅವರು ಕವನಗಳಿಗೆ ಧ್ವನಿ ನೀಡಿದರು.

ಚಿತ್ರಕಲಾವಿದರಾದ ದೇವರಾಜು, ಚಂದ್ರಪ್ರಭ, ಬಸವರಾಜು, ಶಿವಕುಮಾರ್ ಆರ್., ಸ್ಪೂರ್ತಿ, ಸಿಂಚನ, ವೃತಿಕ, ಯಶ್ ಹಾಗೂ ಹೇಮಲತಾ ಅವರು ಕಾವ್ಯದ ಸನ್ನಿವೇಶಗಳನ್ನು ಸ್ಥಳದಲ್ಲೇ ಸುಂದರವಾಗಿ ಕಲಾಕೃತಿಗಳಾಗಿ ಮೂಡಿಸಿದರು.
ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ಗೃಹದ ಎರಡನೇ ವರ್ಷದ ಬಿಎಡ್ ವಿದ್ಯಾರ್ಥಿನಿಯರ ತಂಡ ರೈತರ ಬವಣೆಯನ್ನು ಬಿಂಬಿಸುವ ಸಂದೇಶಪೂರ್ಣ ಗೀತೆಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆಯಿತು. ಸ್ಮಿತಾ ಹೇಮೇಶ್ ಹಾಗೂ ಸುನೀತಾ ಕಿರಣ್ ಅವರು ನಾಡು-ನುಡಿ ಕುರಿತ ನೃತ್ಯ ಪ್ರದರ್ಶಿಸಿದರು.
ಪುಟಾಣಿಗಳಾದ ಭುವನೇಶ್ವರಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರ ವೇಷಭೂಷಣದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು. ಕಲಾವತಿ ಮಧುಸೂದನ್ ಅವರು ಕರೋಕೆ ಗಾಯನದ ಮೂಲಕ ಮನರಂಜಿಸಿದರು.
‘ನೆನಪಿನ ಅಂಗಳದಲ್ಲಿ’ ಕೃತಿ ಬಿಡುಗಡೆ
ಕಾರ್ಯಕ್ರಮದ ಸಂದರ್ಭದಲ್ಲಿ ಉದ್ದೂರಹಳ್ಳಿ ಇನ್ಷೂರೆನ್ಸ್ ಪುಟ್ಟೇಗೌಡ ಟ್ರಸ್ಟ್ ವತಿಯಿಂದ ಕ್ಯಾಪ್ಟನ್ ಜಯರಾಮ್ ಅವರ ‘ನೆನಪಿನ ಅಂಗಳದಲ್ಲಿ’ ಕೃತಿಯನ್ನು ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್ ಬಿಡುಗಡೆ ಮಾಡಿದರು.
ಕೃತಿ ಕುರಿತು ಸಾಹಿತಿ ಟಿ.ಹೆಚ್. ಅಪ್ಪಾಜಿಗೌಡ ಮಾತನಾಡಿದರು. ಕ್ಯಾಪ್ಟನ್ ಜಯರಾಮ್ ಅವರ ಸೇವೆಯನ್ನು ಸ್ಮರಿಸುವ ‘ಸೇವಾ ಯೋಗಿ’ ಲಾವಣಿಯನ್ನು ಉಮಾ ವಿಶ್ವನಾಥ್ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
