ಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದ ಕರ್ತವ್ಯ ಸಮಯದಲ್ಲಿ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಮೂವರು ಅಡುಗೆ ಸಿಬ್ಬಂದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ ಎಂ. ಅಮಾನತುಗೊಳಿಸಿರುವ ಘಟನೆ ಬಳಿಕ, ಅವರಲ್ಲಿ ಒಬ್ಬರಾದ ಮಧುಕುಮಾರ್ ಮನನೊಂದು ಆತ್ಮಹತ್ಯೆ ಎಚ್ಚರಿಕೆ ನೀಡಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಮಾನತುಗೊಂಡವರಲ್ಲಿ ಆನಂದ ಹರಿಜನ್ (ಕಬ್ಬತ್ತಿ ಗ್ರಾಮ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ), ಪ್ರಸಾದ್ ಎಚ್. (ಹಾಸನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ) ಮತ್ತು ಮಧುಕುಮಾರ್ (ಮೊಸಳೆಹೊಸಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ) ಸೇರಿದ್ದಾರೆ.
ಮಧುಕುಮಾರ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, “ನಾನು ಅಕ್ಟೋಬರ್ 7 ರಿಂದ 13 ರವರೆಗೆ ಕರ್ತವ್ಯ ನಿರ್ವಹಿಸಿದ್ದೇನೆ, ಅದರ ಎಲ್ಲ ಜಿಪಿಎಸ್ ಫೋಟೋಗಳು ನನ್ನ ಬಳಿ ಇವೆ. ಅಕ್ಟೋಬರ್ 13ರಂದು ರಾತ್ರಿ 8.30ರ ಸಮಯದಲ್ಲಿ ಡಿಓ ಸಾಹೇಬರು ತೇರಾಪಂಥ ಭವನಕ್ಕೆ ಭೇಟಿ ನೀಡಿದಾಗ, ನಾನು ಕೇವಲ ಕೆಲ ನಿಮಿಷ ಶೌಚಾಲಯಕ್ಕೆ ಹೋಗಿದ್ದೆ. ಆ ಸಮಯದಲ್ಲಿ ಕರ್ತವ್ಯದಿಂದ ಗೈರಾಗಿದ್ದೇನೆ ಎಂಬ ಆರೋಪದ ಮೇರೆಗೆ ನನ್ನನ್ನೇ ಗುರಿಯಾಗಿಸಿಕೊಂಡು ಅಮಾನತು ಮಾಡಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿ: ಮೆಟಾ AI ಗೆ ಧ್ವನಿ ನೀಡಿದ ಮೊದಲ ಭಾರತೀಯ ಸೆಲೆಬ್ರಿಟಿ — ದೀಪಿಕಾ ಪಡುಕೋಣೆ
ಅವರು ಇನ್ನೂ ವಿಡಿಯೋದಲ್ಲಿ, “ನಾನು ಹಿಂದುಳಿದ ವರ್ಗಕ್ಕೆ ಸೇರಿದ್ದೇನೆ ಎಂಬ ಕಾರಣದಿಂದ ನನ್ನ ಮೇಲೆ ಅನ್ಯಾಯವಾಗುತ್ತಿದೆ. ಇದರಿಂದ ಮಾನಸಿಕ ಅಘಾತ ಉಂಟಾಗಿದೆ. ನನ್ನ ಜೀವಕ್ಕೆ ಏನಾದರೂ ಆದರೆ, ಅದರ ಹೊಣೆ ಡಿಓ ಸಾಹೇಬರದ್ದೇ” ಎಂದು ಹೇಳಿಕೆ ನೀಡಿದ್ದಾರೆ.
ಈ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದು, ಇಲಾಖೆಯೊಳಗೂ ಸಂಚಲನ ಉಂಟುಮಾಡಿದೆ. ಅಧಿಕಾರಿಗಳು ಘಟನೆಯ ಬಗ್ಗೆ ವರದಿ ಸಂಗ್ರಹಿಸುತ್ತಿದ್ದು, ಮಧುಕುಮಾರ್ ಅವರ ಹೇಳಿಕೆ ಆಧರಿಸಿ ಮುಂದಿನ ಕ್ರಮದ ನಿರೀಕ್ಷೆಯಿದೆ.
