ರಾಮನಾಥಪುರ: ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಗಣೇಶ ಚಿತ್ರಕಲಾವಿದ ಹಾಗೂ ಪಂಚಶಿಲ್ಪಿ ಕುಶಲಕರ್ಮಿ ಆರ್.ಎಸ್. ರವಿಸುಂದರ್ ತಿಳಿಸಿದರು.
ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವುದು ತಮಗೆ ಬಹಳ ಪ್ರೀತಿಯ ಕೆಲಸವಾಗಿದೆ. ಪಿಒಪಿ ಮೂರ್ತಿಗಳನ್ನು ತಯಾರಿಸುವುದು ಸುಲಭ ಹಾಗೂ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದಾದರೂ, ಅವುಗಳನ್ನು ವಿಸರ್ಜಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು.

ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರ ಸ್ನೇಹಿಯಾಗಿದ್ದು, ನೀರಿನಲ್ಲಿ ಕರಗುವ ಮೂಲಕ ಜಲಮೂಲಗಳ ಮೇಲೆ ಉಂಟಾಗುವ ಮಾಲಿನ್ಯವನ್ನು ತಡೆಯಲು ಸಹಕಾರಿಯಾಗುತ್ತವೆ. ಹೀಗಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಿ ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದರು.
ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಹಬ್ಬ ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ, ಪೂಜಿಸಿ ಬಳಿಕ ವಿಸರ್ಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ರವಿಸುಂದರ್ ತಿಳಿಸಿದರು.
– ಕುಮಾರಸ್ವಾಮಿ ಎಂ.ಎನ್.
