ಕೆ.ಆರ್.ಪೇಟೆ,ಸೆ.09: ತಾಲ್ಲೂಕಿನಲ್ಲಿ ಈ ವರ್ಷದ ಗಣೇಶೋತ್ಸವವನ್ನು ಸುರಕ್ಷತೆ, ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಜೊತೆಗೆ ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.
ಅವರು ಪಟ್ಟಣದ ಜಯಮ್ಮ-ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಗೌರಿ-ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಪುರಸಭೆ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಧರ್ಮಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೆ.14ರಿಂದ ಸೆ.22ರವರೆಗೆ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುವುದು. ಆಯೋಜಕರು ಸೆ.13ರ ಸಂಜೆಯೊಳಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಿದರು. ಸಂಬಂಧಪಟ್ಟ ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ, ಚೆಸ್ಕಾಂ, ಪೊಲೀಸ್ ಇಲಾಖೆ ಅನುಮಿತಿ ಪಡೆದುಕೊಳ್ಳಬೇಕು. ಪ್ರಮುಖವಾಗಿ ಮೈಕ್ ಅನುಮತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಬೇಕು. ಆಯೋಜಕರು ಅನುಮತಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಪ್ರತಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ರಾಸಾಯನಿಕ ಮಿಶ್ರಿತ ಮೂರ್ತಿಗಳಿಗೆ ಅವಕಾಶವಿಲ್ಲ ಎಂದರು. ಕಡ್ಡಾಯವಾಗಿ ಡಿ.ಜೆ. ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಬಳಸಲು ಪ್ರಯತ್ನಿಸಬಾರದು.

ಹೈ-ಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗುವ ಸ್ಥಳಗಳಲ್ಲಿ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಸಂಪೂರ್ಣ ನಿರ್ಬಂಧವಿದೆ. ಅಗತ್ಯ ಬಿದ್ದರೆ ಸಿಸಿಟೀವಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಧ್ವನಿ ವರ್ಧಕಗಳನ್ನು ಅಳವಡಿಸುವ ಸ್ಥಳದಿಂದ 200 ಮೀಟರ್ ವ್ಯಾಪ್ತಿಯಲ್ಲಿ ನಿಗಧಿತ ಡೆಸಿಬಲ್ ಮಿತಿಯನ್ನು ಮೀರಬಾರದು. ಸಾರ್ವಜನಿಕರ ಶಾಂತಿಗೆ ಭಂಗವಾಗದಂತೆ ಕಾರ್ಯಕ್ರಮ ಆಯೋಜಿಸಬೇಕು ಗೌರಿ-ಗಣೇಶ ಮೂರ್ತಿಯನ್ನು 3-4 ದಿನಗಳ ಕಾಲ ಇಡುವವರು ಸ್ವಯಂ ಕಾವಲುಗಾರರಾಗಿ ರಕ್ಷಣೆ ಮಾಡಿಕೊಳ್ಳಬೇಕು. ವಿಸರ್ಜನೆಯನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಮಾಡಬೇಕು. ಗಣೇಶನ ಉತ್ಸವದ ಅಂಗವಾಗಿ ನಡೆಯುವ ಜನಪದ ಕಲಾತಂಡಗಳು ಮೆರವಣಿಗೆ ವಾಹನ ಸಂಚಾರಕ್ಕೆ ತೊಂದರೆಯಾಗದAತೆ ನಡೆಸಬೇಕು. ಸಭೆ ಸಮಾರಂಭಗಳಲ್ಲಿ ಭಾಷಣವು ಪ್ರಚೋದಕಾರಿಯಾಗಿರಬಾರದು. ಪ್ರಸಾದ ವಿತರಣೆಯಲ್ಲಿ ಆಹಾರ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. 40ಮೈಕ್ರಾನ್ಗಿಂತ ಕಡಿಮೆಯಾದ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಯಾವುದೇ ಅವಘಡ ಸಂಭವಿಸಿದಲ್ಲಿ ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ್, ನಾಗಮಂಗಲ ಡಿ.ವೈ.ಎಸ್.ಪಿ ಚೆಲುವರಾಜು, ಕೆ.ಆರ್.ಪೇಟೆ ಟೌನ್ ಠಾಣೆಯ ಇನ್ಸ್ ಪೆಕ್ಟರ್ ಸುನಿಲ್, ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್, ಕಿಕ್ಕೇರಿ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್, ಕೆ.ಆರ್.ಪೇಟೆ ಟೌನ್ ಪಿ.ಎಸ್.ಐ ಬಸವರಾಜ್ ಚಿಂಚೋಳಿ, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತಾಧಿಕಾರಿ ಜಗದೀಶ್, ಪುರ ಪ್ರಮುಖರಾದ ಕಾಯಿಮಂಜೇಗೌಡ, ಭಾರತೀಪುರ ಪುಟ್ಟಣ್ಣ, ಚಿಕ್ಕಗಾಡಿಗನಹಳ್ಳಿ ಸಂತೋಷ್ಕುಮಾರ್, ಮಾಂಬಳ್ಳಿ ಅಶೋಕ್, ಚೌಡೇನಹಳ್ಳಿ ದೇವರಾಜು, ಆಲಂಬಾಡಿಕಾವಲು ಚನ್ನಕೃಷ್ಣ, ತೆಂಡೇಕೆರೆ ನಿಂಗಯ್ಯ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
