ಕೊರಟಗೆರೆ :- ಅತಿ ವೇಗ ಮತ್ತು ಅಜಾಗ್ರತೆಯಿಂದ ಸಂಚರಿಸುತ್ತಿದ್ದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕೊರಟಗೆರೆ ಪಟ್ಟಣದ ವಡ್ಡಗೆರೆ ಬೈಪಾಸ್ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೃತ ಮಧುಗಿರಿ ತಾಲೂಕಿನ ದೊಡ್ಡಹೊಸಹಳ್ಳಿ ಗ್ರಾಮದ ನಿವಾಸಿ ತಿಮ್ಮಣ್ಣ (40) ಎಂದು ಗುರುತಿಸಲಾಗಿದೆ,
ಅವರು ಕೊರಟಗೆರೆ ಪಟ್ಟಣದ ಸಾದರ ಸಮುದಾಯ ಭವನದ ಮುಂಭಾಗದ ರಸ್ತೆ ಪಕ್ಕದಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ವೇಗವಾಗಿ ಬಂದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಈ ವೇಳೆ ರಸ್ತೆಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ಗೂಡ್ಸ್ ವಾಹನ ಉರುಳಿದ್ದು, ಅದರಡಿ ಸಿಲುಕಿದ ತಿಮ್ಮಣ್ಣ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.
