ಹಾಸನ: ವಿದ್ಯುತ್ ಟ್ರಾನ್ಸ್ಫಾರ್ಮರ್ ಬದಲಾವಣೆ ಮಾಡಿಕೊಡುವ ನೆಪದಲ್ಲಿ ಲಂಚ ಪಡೆಯುತ್ತಿದ್ದ ಜ್ಯೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ.
ಬಸವಾಪಟ್ಟಣ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಯೂನಿಯರ್ ಇಂಜಿನಿಯರ್ ಶ್ರೀಧರ್ ಅವರು ₹6,000 ಲಂಚ ಕೇಳಿದ್ದ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಅರಕಲಗೂಡು ತಾಲ್ಲೂಕಿನ ಬೆಟ್ಟಸೋಗೆ ಗ್ರಾಮದ ಗಿರೀಶ್ ಬಿ.ಪಿ. ಅವರಿಂದ ಟ್ರಾನ್ಸ್ಫಾರ್ಮರ್ ಬದಲಾವಣೆಗಾಗಿ ಲಂಚ ಬೇಡಿಕೆ ಇಟ್ಟಿದ್ದ ಶ್ರೀಧರ್, 9-1-2025ರಂದು ₹3,500ನ್ನು ಫೋನ್ಪೇ ಮೂಲಕ ಪಡೆದಿದ್ದರು ಎನ್ನಲಾಗಿದೆ.
ಇಂದು ಉಳಿದ ₹2,500ನ್ನು ಫೋನ್ಪೇ ಮೂಲಕ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶ್ರೀಧರ್ ಅವರನ್ನು ಬಲೆಗೆ ಬೀಳಿಸಿದ್ದಾರೆ. ಆರೋಪಿಯಿಂದ ಲಂಚದ ಮೊತ್ತ ಹಾಗೂ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಶಿಲ್ಪಾ ಮತ್ತು ಚಂದ್ರಶೇಖರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
