ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೆಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ನಡೆಯಿತು. ಶಾಸಕ ಹೆಚ್.ಟಿ. ಮಂಜು ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರು ಒಂದೇ ಸ್ಥಳದಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ಪಡೆದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ಸುಷ್ಮಾ ಕೆ. ಅವರು ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನದ ಕುರಿತು ಜನಜಾಗೃತಿ ಮೂಡಿಸಿ, ಇ-ಸ್ವತ್ತು ಪಡೆಯಲು ಅಗತ್ಯವಿರುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸಿದರು. ಗ್ರಾಮಠಾಣ ಕಟ್ಟಡಗಳಿಗೆ 4,000 ಚದರ ಅಡಿ ಮಿತಿಯಲ್ಲಿ ಇ-ಸ್ವತ್ತು ವಿತರಿಸುವ ಕುರಿತು ಮಾಹಿತಿ ನೀಡಿದರು.

ಪಿಂಚಣಿ ಯೋಜನೆ, ಪೋಡಿ ಆಂದೋಲನ, ಖಾತೆ ಬದಲಾವಣೆ, ಪಡಿತರ ಚೀಟಿ ತಿದ್ದುಪಡಿ, ಗ್ಯಾರಂಟಿ ಯೋಜನೆಗಳು, ನರೇಗಾ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಟಿ. ಮಂಜು ಅವರು ಹಲವು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಎಸ್. ಶ್ರೇಯಸ್, ಇಒ ಸುಷ್ಮಾ ಕೆ., ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
