ಕೆ.ಆರ್.ಪೇಟೆ,ಜು.06: ತಾಲ್ಲೂಕು ನಯನಜ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘದ ಶೀಳನೆರೆ ಹೋಬಳಿ ಘಟಕದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಮುರುಕನಹಳ್ಳಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದ ತಾಲ್ಲೂಕು ನಯನ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಪ್ಪ ಅವರು ಮಾತನಾಡಿ ನಯನಜ ಕ್ಷತ್ರಿಯ ಸಮುದಾಯದವರು ಒಗ್ಗಟ್ಟಾಗಿ ಸಂಘಟಿತರಾದರೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಸಮುದಾಯದ ಒಬ್ಬರೂ ಶಾಸಕರಿಲ್ಲದೇ ಇರುವ ಕಾರಣ ಸರ್ಕಾರವು ನಾಮಿನಿ ವಿಧಾನಪರಿಷತ್ ಸದಸ್ಯರನ್ನು ನೇಮಕ ಮಾಡುವಾಗ ನಯನ ಕ್ಷತ್ರಿಯ ಮುಖಂಡರೊಬ್ಬರನ್ನು ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದರೆ ರಾಜ್ಯದಲ್ಲಿರುವ ನಯನಕ್ಷತ್ರಿಯ ಸಮುದಾಯದ ಪ್ರತಿನಿಧಿಯಾಗಿ ಕೆಲಸ ಮಾಡಲು ಅವಕಾಶವಾಗುತ್ತದೆ ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಮನಸ್ಸು ಮಾಡಿ ನಮ್ಮ ನಯನಕ್ಷತ್ರಿಯ ಸಮಾಜಕ್ಕೆ ಅವಕಾಶ ಕಲ್ಪಿಸಬೇಕು. ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.
ಸಮುದಾಯದ ಬಂಧುಗಳು ಸಂಘಟಿತರಾದರೆ ಸಮುದಾಯದ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಬಹುದು. ಸರ್ಕಾರದ ಸೌಲಭ್ಯಗಳು, ಯೋಜನೆಗಳ ಮಾಹಿತಿ ಎಲ್ಲರಿಗೂ ತಲುಪುವಂತಾಗುತ್ತದೆ. ಶಿಕ್ಷಣ, ಉದ್ಯೋಗ, ಆರೋಗ್ಯದಲ್ಲಿ ಪರಸ್ಪರ ಸಹಾಯ ಮಾಡಬಹುದು. ನಮ್ಮ ಸಂಪ್ರದಾಯ, ಆಚರಣೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬಹುದು ಎಂದರು. ಇದೆ ಸಂದರ್ಭದಲ್ಲಿ ನಯನಜಕ್ಷತ್ರಿಯ ಸಮಾಜದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ತಾಲ್ಲೂಕು ಗೌರವ ಅಧ್ಯಕ್ಷರಾದ ಮಂಜುನಾಥ್ , ಕಾರ್ಯದರ್ಶಿ ಸೋಮಶೇಖರ್, ಉಪಾಧ್ಯಕ್ಷ ತಮ್ಮಯ್ಯ, ಮರಿಯಯ್ಯ, ದಿನೇಶ್, ಸತೀಶ್, ಎ.ವಿ.ಮಂಜುನಾಥ್, ಜಗದೀಶ್, ಗಿರೀಶ್, ಶೀಳನೆರೆ ಹೋಬಳಿ ಅಧ್ಯಕ್ಷರಾದ ಎಂ.ಮೋಹನ್, ಕಾರ್ಯದರ್ಶಿ ಶಾಂತಮೂರ್ತಿ (ಚೇತನ್), ಉಪಾಧ್ಯಕ್ಷರಾದ ಮಂಜುನಾಥ್ ಕೆ ಆರ್, ಖಜಾಂಚಿ ವಿನಯ್, ಮತ್ತು ಮಹಾದೇವ್, ಸುರೇಶ್, ಮಂಜುನಾಥ್ ಹೆಚ್ ಎನ್, ಪ್ರಕಾಶ್.ಹೆಚ್.ಆರ್, ಅರುಣ್ ಕುಮಾರ್, ಹೆಚ್.ಆರ್.ವೆಂಕಟೇಶ್, ಪಾಪಣ್ಣ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
