ಕೆ.ಆರ್.ಪೇಟೆ.ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪಟ್ಟಲದಮ್ಮ ದೇವಾಲಯದ ಪೂಜಾ ವಿವಾದಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಗ್ರಾಮದ ದೇವತೆ ಆದಿಪರಾಶಕ್ತಿ ಪಟ್ಟಲದಮ್ಮ ದೇವಾಲಯಕ್ಕೆ ಬೀಗ ಹಾಕಿದ್ದನ್ನು ಪ್ರಶ್ನಿಸಿ, ಗ್ರಾಮದ ಎಲ್ಲಾ ಜನಾಂಗದ ಯಜಮಾನರು, ಹಿರಿಯರು, ಮುಖಂಡರು ಒಗ್ಗಟ್ಟಾಗಿ ನ್ಯಾಯ ಪಂಚಾಯಿತಿ ನಡೆಸಿ, ಬೀಗ ತೆರೆದು ಪೂಜೆ ಸಲ್ಲಿಸುವ ಮೂಲಕ ತಮ್ಮ ಸ್ವಾಭಿಮಾನ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.

ಗ್ರಾಮದ ಹಿರಿಯ ಯಜಮಾನ ಚಿಕ್ಕೆಗೌಡ ಮಾತನಾಡಿ ನಮ್ಮ ಹೊಸಹೊಳಲು ಗ್ರಾಮದ ಪಟ್ಟಲದಮ್ಮ ದೇವಾಲಯದಲ್ಲಿ ನಿತ್ಯ ಪೂಜಾ ಕೈಂಕರ್ಯ ನಡೆಸುವ ವಿಚಾರದಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದವು. ಈ ವಿಚಾರವನ್ನು ಮುಂದಿಟ್ಟುಕೊಂಡು ಕೆ.ಆರ್.ಪೇಟೆ ಪಟ್ಟಣದ ಕೆಲವು ವ್ಯಕ್ತಿಗಳು ದೇವಾಲಯಕ್ಕೆ ಬೀಗ ಹಾಕಿ, ಪೂಜೆಗೆ ತಡೆಯೊಡ್ಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದರು.ದೇವಾಲಯಕ್ಕೆ ಬೀಗ ಹಾಕಿರುವ ವಿಷಯ ಗ್ರಾಮದಲ್ಲಿ ತಿಳಿಯುತ್ತಿದ್ದಂತೆ, ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಕ್ಷಣವೇ ಗ್ರಾಮದ ಪ್ರಮುಖರು, ಎಲ್ಲಾ ಜನಾಂಗದ ಯಜಮಾನರು, ಯುವಕರು ದೇವಾಲಯದ ಆವರಣದಲ್ಲಿ ತೀರ್ಮಾನಿಸಿ ಹಲವು ವರ್ಷಗಳಿಂದ ನಾವು ಪೂಜೆ ಮಾಡಿಕೊಂಡು ಬಂದಿದ್ದೇವೆ ನಮ್ಮ ಗ್ರಾಮದ ದೇವಸ್ಥಾನಕ್ಕೆ ಬೀಗ ಹಾಕಲು ಹೊರಗಿನವರು ಯಾರು? ಅವರಿಗೆ ಯಾವ ಹಕ್ಕಿದೆ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಗ್ರಾಮದ ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಅಂತಿಮವಾಗಿ ಎಲ್ಲರ ಒಮ್ಮತದ ತೀರ್ಮಾನದಂತೆ ದೇವಾಲಯಕ್ಕೆ ಹಾಕಲಾಗಿದ್ದ ಬೀಗವನ್ನು ತೆರೆದು ದೇವಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಲಾಯಿತು ಈ ಮೂಲಕ ಗ್ರಾಮಸ್ಥರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.ದೇವಾಲಯದ ಮೂಲ ಅರ್ಚಕ ಕುಟುಂಬದವರಾದ ಪಳನಿ-ಉಪ್ಪಮ್ಮ ಕುಟುಂಬದ ಯೋಗೇಶ್ ಅವರು ಈ ಹಿಂದೆ ಹೇಗೆ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿದ್ದರೋ ಹಾಗೆಯೇ ಮುಂದೆಯೂ ಪೂಜೆಯನ್ನು ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲಾಯಿತು.ಇನ್ನು ಮುಂದೆ ದೇವಾಲಯದ ಆಡಳಿತ ಮತ್ತು ಪೂಜಾ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಯಜಮಾನ್ ಚಿಕ್ಕೆಗೌಡ, ರಾಮೇಗೌಡ, ಮಂಜೇಗೌಡ,ಪುಟ್ಟರಾಜು,ಚನ್ನಕೇಶವಗೌಡ, ಹೆಚ್,ಪುಟ್ಟರಾಜು,ತಾ.ಪಂ ಮಾಜಿ ಸದಸ್ಯ ರಾಜು, ಪುರಸಭೆ ಮಾಜಿ ಸದಸ್ಯ ಹೆಚ್.ಡಿ,ಅಶೋಕ್, ಗೋಪಾಲಗೌಡ, ಸುರೇಶ ಹರಿಜನ್,ಗೋಪಾಲ್,ರಾಜಣ್ಣ, ಸತೀಶ್,ಎಳನೀರು ಅಶೋಕ್, ಯುವ ಮುಖಂಡ ಅರ್ಜುನ್,ಬೂರಿ ಜಯಮ್ಮ,ಮಂಜುಳ,ರೇಣುಕಾ, ಪ್ರಭಾವತಿ,ನಾಗಮ್ಮ, ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
