ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದ ಸರ್ವೆ ನಂ.58 ರಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ದೇವಾಲಯ ನಿರ್ಮಿಸಿಕೊಂಡು ವಾಮಾಚಾರ ಕೃತ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ದೇವಾಲಯದ ಅರ್ಚಕ ರಾಜೇಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಕ್ರಮ ದೇವಾಲಯವನ್ನು ತೆರವುಗೊಳಿಸಬೇಕು ಎಂದು ಕೋರಿ ತೇಗನಹಳ್ಳಿ, ಬೈರನಪಾಣ್ಯ, ಹರೀ ನಹಳ್ಳಿ, ಅಗ್ರಹಾರಬಾಚಹಳ್ಳಿ, ಬಳ್ಳೇಕೆರೆ, ಮಾರ್ಗೋನಹಳ್ಳಿ, ನಗರೂರು , ಚಿಕ್ಕೋಸಹಳ್ಳಿ ಗ್ರಾಮಗಳ ಸಾರ್ವಜನಿಕರು ತಹಶೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಘಟನೆ ವಿವರ:
ಕಸಬಾ ಹೋಬಳಿಯಮಾರ್ಗೋನಹಳ್ಳಿ ಗ್ರಾಮದ ಜಮಾ ಬಂದಿಗೆ ಸೇರಿದ ಸರ್ವೆ ನಂ.58 ರಲ್ಲಿರುವ ಸರ್ಕಾರಿ ಗೋಮಾಳದಲ್ಲಿ ರಾಜೇಶ್ ಎಂಬುವವರು ಅಕ್ರಮವಾಗಿ ದೇವಾಲಯ ನಿರ್ಮಿಸಿ ಕೊಂಡು, ನನ್ನ ಮೈ ಮೇಲೆ ಚಂದಗೋನಹಳ್ಳಿ ದೇವರು ಬರುತ್ತದೆ ಎಂದು ಈ ಭಾಗದಲ್ಲಿ ನಂಬಿಕೆ ಹುಟ್ಟಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಆರೋಪಿಸಿಸರ
ದೇವರ ಪೂಜೆಗೆಂದು ಬರುವ ಭಕ್ತಾಧಿಗಳಿಗೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ರೂಪಿಸಿಕೊಡುತ್ತೇನೆ, ನನಗೆ 20,000 ಕೊಡಿ, 50,000 ಕೊಡಿ” ಎಂದು ಜನರಲ್ಲಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ಬಳಿ ಹೋದ ನೂರಾರು ಸಾರ್ವಜನಿಕರಿಂದ ಸಾವಿರಾರು ರೂಪಾಯಿಗಳನ್ನು ಫೋನ್ ಪೇ ಮೂಲಕ ಹಾಗೂ ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲಕ್ಷಾಂತರ ರೂಪಾಯಿ ಹಣ ನೀಡಿದರೂ ಯಾವುದೇ ಉಪಯೋಗವಿಲ್ಲದ ಕಾರಣ , ಹಣವನ್ನು ವಾಪಸ್ ಕೇಳಿದಾಗ ಅಂತಹ ಭಕ್ತರ ಅವರ ಮೇಲೆ ದಬ್ಬಾಳಿಕೆ ನಡೆಸಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ರಾಜೇಶ್ನಿಂದ ಹಣ ಕಳೆದುಕೊಂಡಿರುವ ಹಲವಾರು ಮಂದಿಗೆ ಹಣದ ಜೊತೆಗೆ ನೆಮ್ಮದಿಯನ್ನು ಸಹ ಹಾಳು ಮಾಡಿಕೊಂಡಿರುವ ಸಾಕಷ್ಟು ಮಂದಿ ನ್ಯಾಯ ಕೊಡಿಸುವಂತೆ ಕೋರಿ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ರಾಜೇಶ್ ತನ್ನಲ್ಲಿಗೆ ಬರುವ ಭಕ್ತಾದಿಗಳು ಬೇರೆ ಯಾರಿಗಾದರೂ ಕೆಟ್ಟದ್ದು ಬಯಸಬೇಕೆಂದು ಹೇಳಿದರೆ, ಯಾರಿಗೆ ಕೆಟ್ಟದ್ದು ಮಾಡಬೇಕು ಅವರ ಫೋಟೋಗಳನ್ನು ತೆಗೆದುಕೊಂಡು ಶವ ಸಂಸ್ಕಾರ ಮಾಡಿದ ಸ್ಥಳಕ್ಕೆ ರಾತ್ರಿ ವೇಳೆ ತನ್ನ ಸಹಚರರೊಂದಿಗೆ ರಾತ್ರಿ ವೇಳೆ ಹೋಗಿ ಮಣ್ಣಿನ ಮಡಿಕೆ, ಕುಡಿಕೆಗಳಲ್ಲಿ ಫೋಟೋಗಳನ್ನು ಇಟ್ಟು, ನಿಂಬೆಹಣ್ಣು, ಮೊಟ್ಟೆಗಳನ್ನು ಹಾಕಿ ವಾಮಾಚಾರ ಮಾಡಿ ಸಮಾಧಿ ಜಾಗವನ್ನು ಬಗೆದು ಫೋಟೋ ಇರುವ ಮಡಿಕೆಗಳನ್ನು ಹೂಳುವ ಮೂಲಕ ವಾಮಾಚಾರ ಮಾಡಿ , ಗೌರವಯುತವಾಗಿ ಮಾಡಿದ ಶವಸಂಸ್ಕಾರಕ್ಕೂ ಅಪಚಾರ ಮಾಡುತ್ತಿದ್ದಾನೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕಳೆದ ಒಂದು ವರ್ಷಗಳ ಹಿಂದೆ ಅಗ್ರಹಾರಬಾಚಹಳ್ಳಿ ಗ್ರಾಮದ ದಲಿತ ಕಾಲೋನಿಯ ಶಿವಯ್ಯ ಎಂಬುವವರು ಮೃತಪಟ್ಟಿದ್ದರು. ಅವರನ್ನು ಶವ ಸಂಸ್ಕಾರ ಮಾಡಿದ ಜಾಗಕ್ಕೆ ಇದೇ ರಾಜೇಶ್ ಮತ್ತು ಆತನ ಸಹಚರರು ಹೋಗಿ ವಾಮಾಚಾರ ಮಾಡಿದ್ದರು. ಇದರಿಂದಾಗಿ ಅಗ್ರಹಾರಬಾಚಹಳ್ಳಿಯಲ್ಲಿ ಎರಡು ದಲಿತ ಕುಟುಂಬಗಳ ನಡುವೆ ಪರಸ್ಪರ ಜಗಳ ಮಾರಾಮಾರಿ ಉಂಟಾಗಿತ್ತು. ಈತ ಮಾಡಿದ ವಾಮಾಚಾರದಿಂದ ಎರಡು ದಲಿತ ಕುಟುಂಬಗಳ ನಡುವೆ ವೈಮನಸ್ಯಕ್ಕೆ ಕಾರಣ ಉಂಟಾಗಿತ್ತು . ಆಗ ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ಈ ಕೃತ್ಯವನ್ನು ಮಾಡಿದ ರಾಜೇಶ್ನನ್ನು ಆತನ ದೇವಸ್ಥಾನದ ಬಳಿ ಹೋಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ರಾಜೇಶ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದನು. ಆಗ ಗ್ರಾಮಸ್ಥರು ಮತ್ತೊಮ್ಮೆ ಇಂತಹ ವಾಮಾಚಾರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿ ಬಂದಿದ್ದರು ಎಂದು ತಿಳಿಸಲಾಗಿದೆ. ಆದರೂ ಸಹ ರಾಜೇಶ್ ತನ್ನ ವಾಮಾಚಾರ ಕೃತ್ಯಗಳನ್ನು ಬಿಡದೆ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ.
ಇದರಿಂದಾಗಿ ಈ ಮೇಲೆ ಕಾಣಿಸಿದ ಹಲವು ಗ್ರಾಮಗಳಲ್ಲಿ ಮೃತ ವ್ಯಕ್ತಿಗಳ ಸಮಾಧಿಯ ಬಳಿ ಹೋಗಿ ವಾಮಾಚಾರ ಮಾಡುವುದು ಇವರ ದಿನನಿತ್ಯದ ಪರಿಪಾಠವಾಗಿರುತ್ತದೆ. ಇದರಿಂದಾಗಿ ಈ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ದೇವರ ಹೆಸರಿನಲ್ಲಿ ವಾಮಾಚಾರದ ಕೃತ್ಯಗಳನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಅರ್ಚಕ ರಾಜೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸರ್ಕಾರಿ ಗೋಮಾಳದಲ್ಲಿ ರಾಜೇಶ್ ನಿರ್ಮಿಸಿರುವ ದೇವಾಲಯವನ್ನು ಕೂ ಡಲೇ ತೆರವುಗೊಳಿಸಬೇಕು.

ಈ ಮೂಲಕ ಈ ಭಾಗದ ವಿವಿಧ ಗ್ರಾಮಗಳ ಜನರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಈತನು ದೇವಾಲಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೂಡ ಪಡೆದುಕೊಂಡಿರುತ್ತಾನೆ ಎಂದು ಆರೋಪಿಸಲಾಗಿದೆ. ಇದರಿಂದ ವಿದ್ಯುತ್ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಾನೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರಿಂದ ಇಂತಹ ಕಾನೂನು ಬಾಹಿರ ಸಮಾಜಘಾತಕ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ರಾಜೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತೇಗನಹಳ್ಳಿ, ಬೈರನವಳ್ಳಿ, ಹರಿನಹಳ್ಳಿ, ಅಗ್ರಹಾರಬಾಚಹಳ್ಳಿ, ಬಳ್ಳೇಕೆರೆ, ಮಾರ್ಗೋನಹಳ್ಳಿ, ನಾಗವಾರ, ಚಿಕ್ಕೋಸಹಳ್ಳಿ ಮತ್ತಿತ್ತರ ಗ್ರಾಮಗಳ ಸಾರ್ವಜನಿಕರು ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ತೇಗನಹಳ್ಳಿ ಮಂಜೇಗೌಡ, ಪುನೀತ್ ಕುಮಾರ್, ಚಿಕ್ಕೋಸಹಳ್ಳಿ ಮಂಜುನಾಥಸ್ವಾಮಿ, ಸಿ.ಆರ್. ರಾಘವೇಂದ್ರ, ಗುರುವಯ್ಯ, ಚಿಲ್ಲದಹಳ್ಳಿ ಗ್ರಾ.ಪಂ.ಮಾಜಿ ಸದಸ್ಯ ಶ್ರೀನಿವಾಸ್, ಕೃಷ್ಣೇಗೌಡ, ಎಂ.ಜೆ.ಕುಮಾರ್, ಮಂಜು, ಸ್ವಾಮಿ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
