ಕೆ.ಆರ್.ಪೇಟೆ: ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಧರ್ಮಧ್ವಜ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವು ಜಾನಪದ ಕಲಾತಂಡಗಳ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಪ್ರವಾಸಿ ಮಂದಿರ ವೃತ್ತ, ಭವವೇಶ್ವರ ವೃತ್ತ (ದುರ್ಗಾಭವನ್), ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಮುಖ ರಸ್ತೆ, ಅಗ್ರಹಾರ ವೃತ್ತ, ಹೊಸಹೊಳಲು ರಸ್ತೆ, ಅಂಬೇಡ್ಕರ್ ರಸ್ತೆ, ಮುಕ್ಕಟ್ಟೆ ಚೌಕ, ಡಾ. ಪುನೀತ್ ರಾಜ್ಕುಮಾರ್ ರಸ್ತೆ, ಕೆರೆಬೀದಿ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಣಪತಿ ಮೂರ್ತಿಯ ದರ್ಶನ ಪಡೆದರು.
ಮೆರವಣಿಗೆಯಲ್ಲಿ ಪೌರಾಣಿಕ ಹಾಗೂ ಸಾಂಸ್ಕೃತಿಕ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿದ್ದವು. ಟ್ರ್ಯಾಕ್ಟರ್ನಲ್ಲಿ ಅಳವಡಿಸಲಾಗಿದ್ದ ಆಂಜನೇಯ ಸ್ವಾಮಿಯ ಬೃಹತ್ ಮೂರ್ತಿ, ಶ್ರೀರಾಮನು ರಾವಣನನ್ನು ಸಂಹರಿಸುವ ದೃಶ್ಯ ಹಾಗೂ ಗಾಯಗೊಂಡ ಜಟಾಯುವಿನ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆದವು. ಕೆಂಪು ಮತ್ತು ಬಿಳಿ ಸೇವಂತಿಗೆ ಹೂಗಳಿಂದ ಅಲಂಕರಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯು ಭಕ್ತರ ಗಮನ ಸೆಳೆಯಿತು.
ಡೊಳ್ಳು, ತಮಟೆ, ನಾಸಿಕ್ ಬ್ಯಾಂಡ್ ಹಾಗೂ ಡಿಜೆ ಸಂಗೀತದ ಸದ್ದಿಗೆ ಯುವಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಜೆಯಿಂದ ತಡರಾತ್ರಿವರೆಗೂ ನಡೆದ ಮೆರವಣಿಗೆಯಲ್ಲಿ ಪಟ್ಟಣದ ನಾಗರಿಕರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಏಕತೆ ಸಾರುವ ಉತ್ಸವ: ಶ್ರೀ ಗಂಗಾಧರ ಶಿವಾಚಾರ್ಯಸ್ವಾಮೀಜಿ
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮೀಜಿ ಗಣೇಶೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಗಣೇಶ ಹಬ್ಬ ಕೇವಲ ಧಾರ್ಮಿಕ ಆಚರಣೆಯಾಗಿರದೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಹೇಳಿದರು.
ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಭಾವೈಕ್ಯತೆ ಹಾಗೂ ಏಕತೆಯ ಸಂದೇಶ ಸಾರಲಾಗುತ್ತದೆ. ಹಬ್ಬ, ಜಾತ್ರೆ ಮತ್ತು ಉತ್ಸವಗಳ ಮೂಲಕ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಸೇರಿದಂತೆ ನಮ್ಮ ಜಾನಪದ ಕಲೆಗಳು ಉಳಿಯುವುದರ ಜೊತೆಗೆ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಪರಿಚಯವಾಗುತ್ತದೆ ಎಂದರು.

ಗಣೇಶೋತ್ಸವದ ಸಂದರ್ಭದಲ್ಲಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳು ಹಾಗೂ ಸಣ್ಣ ವ್ಯಾಪಾರಿಗಳ ವಹಿವಾಟು ಹೆಚ್ಚುವುದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯುತ್ತದೆ. ಇಂತಹ ಉತ್ಸವಗಳು ಜನರಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಕಾರಾತ್ಮಕ ಮನೋಭಾವ ಮೂಡಿಸುತ್ತವೆ. ರಾಮ-ರಾವಣರ ಕಲಾಕೃತಿಗಳ ಮೂಲಕ ಕೆಟ್ಟದರ ಮೇಲೆ ಒಳ್ಳೆಯದರ ಗೆಲುವಿನ ಸಂದೇಶವನ್ನು ಮಕ್ಕಳಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಗಣ್ಯರ ಉಪಸ್ಥಿತಿ
ಗಣೇಶೋತ್ಸವ ಸಮಾರಂಭದಲ್ಲಿ ಶಾಸಕ ಹೆಚ್.ಟಿ. ಮಂಜು, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್ ಹಾಗೂ ಬಿ. ಪ್ರಕಾಶ್, ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್, ವಿಜಯ್ ರಾಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಅಂಬರೀಶ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ. ಹರೀಶ್, ರಾಜ್ಯ ಕೈಗಾರಿಕಾ ಮಹಾಮಂಡಳದ ಅಧ್ಯಕ್ಷ ಬಸ್ ಸಂತೋಷ್ ಕುಮಾರ್ ಸೇರಿದಂತೆ ಧರ್ಮಧ್ವಜ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಗಣ್ಯರು ಪಾಲ್ಗೊಂಡಿದ್ದರು.

ಧರ್ಮಧ್ವಜ ಸೇವಾ ಸಮಿತಿಯ ಆಯೋಜನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಡ್ಯ ಜಿಲ್ಲಾ ಪೊಲೀಸ್ ಹಾಗೂ ಕೆ.ಆರ್.ಪೇಟೆ ಟೌನ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಿಂದ ಆಗಮಿಸಿದ್ದ ಸುಮಾರು 500 ಮಂದಿ ಪೊಲೀಸರು ಮತ್ತು ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

- ಶ್ರೀನಿವಾಸ್ ಆರ್.
