ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಡುವಿಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸಿ. ರವಿ ಕುಮಾರ್ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಎಂ.ಪಿ. ಲೋಕೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಸಿ.ರವಿ ಕುಮಾರ್ ಹಾಗೂ ಸಂಜಯ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸಂಜಯ್ 4 ಮತಗಳನ್ನು ಪಡೆದು ಪರಾಭವಗೊಂಡರೆ, ಎಂ.ಸಿ. ರವಿ ಕುಮಾರ್ 8 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂಘದ ಕಾರ್ಯದರ್ಶಿ ಎಸ್.ಎನ್. ಕುಮಾರ್ ಘೋಷಿಸಿದರು.
ಆಯ್ಕೆಯ ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಂ.ಸಿ. ರವಿ ಕುಮಾರ್, ನನ್ನ ಮೇಲೆ ನಂಬಿಕೆ ಇಟ್ಟು ನಮ್ಮ ನಾಯಕರಾದ ಮನ್ಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಎಂ.ಬಿ. ಹರೀಶ್,ತಾ.ಪಂ ಮಾಜಿ ಸದಸ್ಯ ಮಾಧವಪ್ರಸಾದ್ ನಮ್ಮ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಎಂ.ಪಿ. ಲೋಕೇಶ್ ಹಾಗೂ ಮುಖಂಡ ನಾಗೇಶ್ ಅವರ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಚುನಾವಣೆಯಲ್ಲಿ ಮತ ನೀಡುವ ಮೂಲಕ ಬೆಂಬಲ ನೀಡಿದ ನಿರ್ದೇಶಕರಿಂದ ಜಯಶೀಲನಾಗಿದ್ದೇನೆ.ನನ್ನ ಆಡಳಿತ ಅವಧಿಯಲ್ಲಿ ರೈತ ಬಾಂಧವರ ಹಿತಕಾಯುವಿಕೆಯೇ ಮೊದಲ ಆದ್ಯತೆಯಾಗಿರುತ್ತದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ, ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಲು ಆದ್ಯತೆ ನೀಡಲಾಗುವುದು. ಸಾಲ ಮರುಪಾವತಿಗೆ ಹೆಚ್ಚಿನ ಸಮಯಾವಕಾಶ ಕಲ್ಪಿಸುವುದು, ಸಂಘದ ಸದಸ್ಯರಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವುದು ನನ್ನ ಗುರಿ. ಸಂಘದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿ, ಸದಸ್ಯರಿಗೆ ಹೆಚ್ಚಿನ ಲಾಭಾಂಶ ನೀಡಲು ಶ್ರಮಿಸುತ್ತೇನೆ. ಪಾರದರ್ಶಕ ಆಡಳಿತ ನೀಡುವ ಮೂಲಕ ಸಂಘದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಹಿರಿಯರ ಮಾರ್ಗದರ್ಶನ ಹಾಗೂ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸುತ್ತೇನೆ ಎಂದು ನೂತನ ಅಧ್ಯಕ್ಷ ಎಂ.ಸಿ. ರವಿ ಕುಮಾರ್ ಭರವಸೆ ನೀಡಿದರು.

ನೂತನ ಅಧ್ಯಕ್ಷರನ್ನು ಶಾಲು ಹೊದಿಸಿ ಅಭಿನಂದಿಸಿ ಮಾತನಾಡಿದ ಟಿ.ಪಿ.ಸಿ.ಎಂ.ಎಸ್ ನಿರ್ದೇಶಕ ಹಾಗೂ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಎಂ.ಪಿ. ಲೋಕೇಶ್, ಸಹಕಾರ ಸಂಘಕ್ಕೆ ಈ ಚುನಾವಣೆಯ ಅವಶ್ಯಕತೆ ಇರಲಿಲ್ಲ. ಆದರೂ ನಡೆದ ಚುನಾವಣೆಯಲ್ಲಿ ನಮ್ಮ ಬೆಂಬಲದ ಎಂ.ಸಿ. ರವಿ ಕುಮಾರ್ ಅವರು ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಎಂ.ಸಿ. ರವಿ ಕುಮಾರ್ ಯುವಕನಾದರೂ ರೈತರ ಬಗ್ಗೆ, ಸಂಘದ ಬಗ್ಗೆ ಅಪಾರ ಕಾಳಜಿ ಉಳ್ಳ ವ್ಯಕ್ತಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.
ಎಂ.ಸಿ ರವಿ ಅವರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಗಳಮ್ಮ,ನಿರ್ದೇಶಕರಾದ ಎಂ ಪಿ ಲೋಕೇಶ್, ಮಂಗಳಮ್ಮ, ಶ್ರೀನಿವಾಸ್, ಎಂ.ಆರ್ ಹೇಮ, ಸುನಂದಮ್ಮ, ಬೇಬಿ,ಕೆ ಆರ್ ರಘು, ಮುಖಂಡರಾದ ಸೊಸೈಟಿ ಮಾಜಿ ಅಧ್ಯಕ್ಷ ನಾಗೇಶ್,ಸಂದೀಪ್ (ದೀಪು)ಗ್ರಾ.ಪಂ ಮಾಜಿ ಸದಸ್ಯ ಆನಂದ್ ಬಾಬು, ಡೈರಿ ಮಾಜಿ ಅಧ್ಯಕ್ಷರಾದ ವಿನೋದ್ ರಾಜ್, ಮಾಜಿ ಅಧ್ಯಕ್ಷ ರಘು,ಮಾಜಿ ನಿರ್ದೇಶಕ ಮನು, ನಿಂಗರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ್ ನಾಯ್ಕ,ಪುನೀತ್ ಬಸವರಾಜು, ಹರೀಶ್,ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
