ಬೆಂಗಳೂರು : ಮೈಕ್ರೋಸಾಫ್ಟ್ ಹಾಗೂ ಮೈಟಿ ಸ್ಟಾರ್ಟ್ಅಪ್ ಹಬ್ ಸಹಭಾಗಿತ್ವದಲ್ಲಿ, ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ 1ಎಂ1ಬಿ (One Million for One Billion) ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 350ಕ್ಕೂ ಹೆಚ್ಚು ಯುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಫೆಬ್ರವರಿ 2026ರಲ್ಲಿ ಆರಂಭಗೊಂಡ ಗ್ರೀನ್ ಸ್ಕಿಲ್ಸ್ ಮತ್ತು ಅಪ್ಲೈಡ್ ಎಐ ಫಾರ್ ಕ್ಲೈಮೇಟ್ ಆಕ್ಷನ್ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳಲ್ಲೇ ಈ ಸಾಧನೆ ಮಾಡಿದ್ದು, ಕೌಶಲ್ಯ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಉದ್ಯೋಗ ಮೇಳದಲ್ಲಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಉತ್ಪಾದನೆ, ಆಟೋಮೋಟಿವ್, ಏರೋಸ್ಪೇಸ್ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳ 10ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸಿದ್ದವು. ಸಾಫ್ಟ್ವೇರ್ ಅಭಿವೃದ್ಧಿ, ಎಐ ಆಧಾರಿತ ಹುದ್ದೆಗಳು, ಉತ್ಪಾದನೆ, ಗುಣಮಟ್ಟ ತಪಾಸಣೆ, ಎಲೆಕ್ಟ್ರಾನಿಕ್ಸ್, ರಿಟೇಲ್, ಟೆಲಿಕಾಂ, ಬಿಎಫ್ಎಸ್ಐ ಹಾಗೂ ಮಾರಾಟ ವಿಭಾಗಗಳಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಯಿತು.
ಎಂಜಿನಿಯರಿಂಗ್, ಐಟಿಐ, ಡಿಪ್ಲೊಮಾ, ಮ್ಯಾನೇಜ್ಮೆಂಟ್ ಹಾಗೂ ವಿಜ್ಞಾನ ಹಿನ್ನೆಲೆಯ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಹಲವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವಿವಿಧ ಉದ್ಯೋಗಗಳಿಗಾಗಿ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
1ಎಂ1ಬಿ ಉಪಾಧ್ಯಕ್ಷ ಸಫಿನ್ ಮ್ಯಾಥ್ಯೂ ಮಾತನಾಡಿ, “ಕೌಶಲ್ಯವನ್ನು ಜೀವನೋಪಾಯವಾಗಿ ಪರಿವರ್ತಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು, ಉದ್ಯೋಗ ಮೇಳದ ಯಶಸ್ಸು ಅದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
2030ರ ವೇಳೆಗೆ ದೇಶಾದ್ಯಂತ ಐದು ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸ್ಥಾಪಿಸಿ, 1 ಲಕ್ಷ ಯುವಕರಿಗೆ ಗ್ರೀನ್ ಸ್ಕಿಲ್ಸ್ ಮತ್ತು ಅಪ್ಲೈಡ್ ಎಐ ತರಬೇತಿ ನೀಡುವ ಜೊತೆಗೆ 50 ಸಾವಿರ ಉದ್ಯೋಗ, ಇಂಟರ್ನ್ಶಿಪ್ ಹಾಗೂ ಜೀವನೋಪಾಯ ಅವಕಾಶಗಳನ್ನು ಕಲ್ಪಿಸುವ ಗುರಿಯನ್ನು 1ಎಂ1ಬಿ ಮತ್ತು ಮೈಕ್ರೋಸಾಫ್ಟ್ ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.
