ರಾಮನಾಥಪುರ, ಆ.3: ಕೊಡಗಿನ ತಲಕಾವೇರಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಾವೇರಿ ನದಿ ರಾಮನಾಥಪುರ ಭಾಗದಲ್ಲಿ ಮೈದುಂಬಿ ಹರಿಯುತ್ತಿದ್ದು, ನದಿಯ ನೀರಿನ ಮಟ್ಟ ಗಮನಾರ್ಹವಾಗಿ ಏರಿಕೆಯಾಗಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹರಿವು ಮತ್ತಷ್ಟು ಹೆಚ್ಚಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ರಾಮನಾಥಪುರ, ಕೊಣನೂರು ಹಾಗೂ ಕೇರಳಾಪುರ ಮಾರ್ಗವಾಗಿ ಹರಿಯುವ ಕಾವೇರಿಯು ಈ ಬಾರಿ ಒಂದು ತಿಂಗಳ ತಡವಾಗಿ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದೆ. ನದಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಹಾಗೂ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲು ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

ಹೆಚ್ಚಿದ ನೀರಿನ ಹರಿವಿನಿಂದ ರಾಮನಾಥಪುರದ ಐ.ಬಿ. ಸರ್ಕಲ್ ಸಮೀಪದ ತಗ್ಗು ಪ್ರದೇಶದ ಕೆಲವು ಮನೆಗಳ ಬಳಿ ನೀರು ನಿಂತಿದ್ದು, ಕೃಷಿ ಜಮೀನುಗಳೂ ಜಲಾವೃತವಾಗಿವೆ. ಪರಿಸ್ಥಿತಿಯ ಮೇಲೆ ಸ್ಥಳೀಯ ಆಡಳಿತ ನಿಗಾ ವಹಿಸಿದೆ.
ಈ ಹಿನ್ನೆಲೆಯಲ್ಲಿ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದ ವಹ್ನಿಪುಷ್ಕರಣಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ, ಜೀವಜಲವಾದ ಕಾವೇರಿ ನದಿಯ ಸಂರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

“ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯು ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾವೇರಿ ಅಭಿಯಾನ ಯಾತ್ರೆ ನಡೆಸುತ್ತಿದ್ದು, ನದಿ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುತ್ತಿದೆ. ಸಾಧು-ಸಂತರು ಹಾಗೂ ವಿವಿಧ ಸಂಘಟನೆಗಳು ನಿರಂತರವಾಗಿ ಕಾವೇರಿ ರಕ್ಷಣೆಗೆ ಒತ್ತಾಯಿಸುತ್ತಿದ್ದು, ನದಿಯನ್ನು ಮಾಲಿನ್ಯದಿಂದ ಕಾಪಾಡಲು ಕಟ್ಟುನಿಟ್ಟಿನ ಕಾನೂನು ಅಗತ್ಯವಾಗಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನೆ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಐ.ಬಿ. ಕುಮಾರ್, ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
