ಕೊರಟಗೆರೆ: ಅಡಿಕೆ ಬೆಳೆಯೊಂದಿಗೆ ಕಾಫಿ, ಕೋಕೋ, ಕಾಳುಮೆಣಸು, ಏಲಕ್ಕಿಯಂತಹ ಮಿಶ್ರ ಬೆಳೆಗಳನ್ನು ಬೆಳೆಸುವ ಮೂಲಕ ರೈತರು ಕೃಷಿಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹದಲ್ಲಿ ಸಲಹೆ ನೀಡಲಾಯಿತು.
ತಾಲ್ಲೂಕಿನ ಕಾದಲಾಪುರ ಗ್ರಾಮದ ರೈತ ವೆಂಕಟರಾಮು ಕೆ.ವಿ. ಅವರ ತೋಟದಲ್ಲಿ ಕ್ಯಾಂಪ್ಕೋ ವತಿಯಿಂದ ರೈತ ಸಂಪರ್ಕ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಕಾಫಿ, ಕೋಕೋ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಯುವ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಮಿಶ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ಕೃಷಿಯಲ್ಲಿ ವೈವಿಧ್ಯತೆ ಸಾಧಿಸುವುದರ ಜೊತೆಗೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾದಲಾಪುರದ ರೈತ ಗಿರೀಶ್, ಅಡಿಕೆ ಬೆಳೆಯನ್ನೇ ಅವಲಂಬಿಸದೆ ಕೋಕೋ ಮತ್ತು ಕಾಫಿಯಂತಹ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲೆಯ ದೇವರಾಯಪಟ್ಟಣದ ರೈತ ಹೇಮಂತ್ ಅವರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡು, ಅಡಿಕೆ ತೋಟದಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಲಿಮಿಟೆಡ್ನ ನಿರ್ದೇಶಕ ರಾಘವೇಂದ್ರ ಎಚ್.ಎಂ., ರೀಜನಲ್ ಮ್ಯಾನೇಜರ್ ಹರೀಶ್ ಭಟ್ ಹಾಗೂ ತುಮಕೂರು ಕ್ಯಾಂಪ್ಕೋ ವಿಭಾಗದ ಮ್ಯಾನೇಜರ್ ನಿತಿನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ ಸಂವಾದ ನಡೆಸಲಾಯಿತು. ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸುವಂತೆ ರೈತರನ್ನು ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ವರದಿ: ನರಸಿಂಹಯ್ಯ ಹೊಸಕೋಟೆ
