ಕೊರಟಗೆರೆ:– 2026–27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಮೂಲ ಕಾರ್ಯಕರ್ತರು ಮತ್ತು ಮೇಲ್ವಿಚಾರಣಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಬೆಳೆ ಕಟಾವು ಪ್ರಯೋಗಗಳ ಉದ್ದೇಶ, ಅನುಸರಿಸಬೇಕಾದ ವಿಧಾನ, ಕ್ಷೇತ್ರಮಟ್ಟದಲ್ಲಿ ಪ್ರಯೋಗಗಳನ್ನು ನಡೆಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಬೆಳೆ ಇಳುವರಿ ಅಂದಾಜು ಮಾಡುವ ಪ್ರಕ್ರಿಯೆ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಬೆಳೆ ಕಟಾವು ಪ್ರಯೋಗಗಳು ಕೃಷಿ ಕ್ಷೇತ್ರದ ಉತ್ಪಾದನಾ ಪ್ರಮಾಣವನ್ನು ನಿಖರವಾಗಿ ಅಂದಾಜಿಸಲು ಹಾಗೂ ವಿವಿಧ ಬೆಳೆಗಳ ಇಳುವರಿ ಕುರಿತು ವಿಶ್ವಾಸಾರ್ಹ ಅಂಕಿ-ಅಂಶಗಳನ್ನು ಸಂಗ್ರಹಿಸಲು ಪ್ರಮುಖವಾಗಿವೆ. ಹೀಗಾಗಿ ಕ್ಷೇತ್ರಮಟ್ಟದಲ್ಲಿ ನಡೆಯುವ ಪ್ರಯೋಗಗಳಲ್ಲಿ ಯಾವುದೇ ಲೋಪವಾಗದಂತೆ ನಿಗದಿತ ನಿಯಮಗಳು ಮತ್ತು ವೈಜ್ಞಾನಿಕ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತರಬೇತಿಯಲ್ಲಿ ತಿಳಿಸಲಾಯಿತು.
ತರಬೇತಿಯಲ್ಲಿ ಕೊರಟಗೆರೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತರಬೇತುದಾರರು ಸೇರಿದಂತೆ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಸ್ಥಳ ಆಯ್ಕೆ, ಬೆಳೆ ಗುರುತಿಸುವಿಕೆ, ಪ್ರಯೋಗದ ವಿಧಾನ, ಬೆಳೆ ಕಟಾವು, ಉತ್ಪಾದನೆ ಅಳೆಯುವಿಕೆ ಹಾಗೂ ಸಂಬಂಧಿತ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಗಳ ಕುರಿತು ಸಿಬ್ಬಂದಿಗೆ ಪ್ರಾಯೋಗಿಕ ಹಾಗೂ ತಾಂತ್ರಿಕ ಮಾಹಿತಿ ನೀಡಲಾಯಿತು. ಸಂಗ್ರಹಿಸಲಾದ ಮಾಹಿತಿಯು ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳು ಹಾಗೂ ಇಳುವರಿ ಅಂದಾಜುಗಳಿಗೆ ಆಧಾರವಾಗುವುದರಿಂದ ನಿಖರತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ರಂಗಸ್ವಾಮಿ, ತಾಲ್ಲೂಕು ಯೋಜನಾಧಿಕಾರಿ ಎಸ್. ಮಧುಸೂದನ, ಉಪ ತಹಶೀಲ್ದಾರ್ ವೆಂಕಟರಂಗನ್, ಸಹಾಯಕ ಕೃಷಿ ಅಧಿಕಾರಿ ಕಲ್ಲೇಶ್ ಪ್ರಸಾದ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಮಾಂಜಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯಲಿರುವ ಬೆಳೆ ಕಟಾವು ಪ್ರಯೋಗಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕೃಷಿ ಉತ್ಪಾದನೆಗೆ ಸಂಬಂಧಿಸಿದ ನಿಖರ ಅಂಕಿ-ಅಂಶಗಳನ್ನು ಸಂಗ್ರಹಿಸಲು ಎಲ್ಲರೂ ಸಹಕರಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
– ಶ್ರೀನಿವಾಸ್ ಕೊರಟಗೆರೆ.
