ಕೊರಟಗೆರೆ: ತಾಲೂಕಿನಲ್ಲಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ಮಾರಾಟದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳನ್ನು ತಕ್ಷಣ ತಡೆಗಟ್ಟಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷವು ಒತ್ತಾಯಿಸಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿತು.
ರೈತರಿಂದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳಿಗೆ ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ)ಗಿಂತ ಶೇ.20ರಿಂದ 30ರಷ್ಟು ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಅಗತ್ಯವಿಲ್ಲದ ಇತರೆ ಗೊಬ್ಬರಗಳನ್ನು ಬಲವಂತವಾಗಿ ಖರೀದಿಸುವಂತೆ ಒತ್ತಾಯಿಸುವ ‘ಲಿಂಕ್ ಸೇಲ್’ ಪದ್ಧತಿಯಿಂದ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ದೂರಲಾಗಿದೆ.
ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ಸಮಗ್ರ ಪರಿಶೀಲನೆ ನಡೆಸಿ, ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರೈತರಿಗೆ ನ್ಯಾಯಸಮ್ಮತ ದರದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಕೃಷಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಕೆಆರ್ಎಸ್ ಒತ್ತಾಯಿಸಿದೆ.
ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಆರಂಭಿಸಲಾಗುವುದು. ಅಲ್ಲದೆ, ತಾಲೂಕಿನ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳ ಪರಿಶೀಲನೆ ನಡೆಸಿ, ಕಂಡುಬರುವ ಅಕ್ರಮಗಳನ್ನು ಸಾರ್ವಜನಿಕರ ಮುಂದೆ ಬಯಲಿಗೆಳೆಯಲಾಗುವುದು ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮನವಿ ಸ್ವೀಕರಿಸಿದ ತಾಲೂಕು ಕೃಷಿ ಅಧಿಕಾರಿ ಕಲ್ಲೇಶ್ ಅವರು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಇಲಾಖೆಯ ವತಿಯಿಂದ ಅಗತ್ಯ ಕ್ರಮ ಕೈಗೊಂಡು ಅನುಕೂಲಕರ ವಾತಾವರಣ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸಂಘಟನೆ ಕಾರ್ಯದರ್ಶಿ ರಮೇಶ್ ಹಾಗೂ ತುಮಕೂರು ಜಿಲ್ಲಾ ಸಂಚಾಲಕ ಗಂಗಾಧರ್ ಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ನಾಗರಾಜು, ರವಿಕುಮಾರ್, ನರಸಿಂಹಮೂರ್ತಿ, ಪುಟ್ಟಸ್ವಾಮಿ, ಸಿದ್ದರಾಮೇಶ್ವರ, ಕೀರ್ತಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
