ಕೊರಟಗೆರೆ:- ದೇಶದಲ್ಲಿ ತೀವ್ರ ಬೇಸಿಗೆಯಿಂದ ಜನ ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿದ್ದು, ಮಹಾಶಕ್ತಿ ಮಾರಮ್ಮ ತಾಯಿ ಕೃಪೆಯಿಂದ ಆದಷ್ಟು ಬೇಗ ಮಳೆಯ ಆಗಮನವಾಗಿ ಸಮಸ್ತ ಜನತೆಗೆ ನೆಮ್ಮದಿ ದೊರಕಲಿ ಎಂದು ಸಿದ್ದರಬೆಟ್ಟ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಶ್ರೀಮಹಾಶಕ್ತಿ ಮಾರಮ್ಮ ದೇವಿ ಹಾಗೂ ಶ್ರೀ ಅಥವರ್ಣ ಭದ್ರಕಾಳಿ ಅಮ್ಮನವರ ವರಧಂತಿ ಕಾರ್ಯಕ್ರಮ ಹಾಗೂ 77ನೇ ದಿನದ ಮಂಡಲದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಎಲೆರಾಂಪುರ ನರಸಿಂಹಗಿರಿ ಸುಕ್ಷೇತ್ರ ಪರಮಪೂಜ್ಯ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ಧಾರ್ಮಿಕ ಕ್ಷೇತ್ರವು ವಿಶೇಷ ಪವಿತ್ರತೆ ಹೊಂದಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹೆಚ್ಚಾದಷ್ಟು ಅಧರ್ಮ ಅಂತ್ಯವಾಗಿ ಧರ್ಮ ಉಳಿಯಲಿದೆ. ತಾಯಿಯ ಮಹಿಮೆ ಜಗತ್ತಿಗೆ ಅರಳಿ ಭಕ್ತರ ಕಷ್ಟಗಳಿಗೆ ಪರಿಹಾರ ಸಿಗಲಿ ಎಂಬುದು ನಮ್ಮೆಲ್ಲರಾ ಪ್ರಾರ್ಥನೆಯಾಗಿದೆ ಎಂದು ಹೇಳಿದರು.
ಕನ್ನಡ ಚಲನಚಿತ್ರ ನಿರ್ದೇಶಕ ಶಶಾಂಕ್ರಾಜ್ ಮಾತನಾಡಿ, ಚಿಕ್ಕನಹಳ್ಳಿ ಗ್ರಾಮಕ್ಕೆ ಮಹಾಶಕ್ತಿ ಮಾರಮ್ಮ ಮತ್ತು ಚೌಡೇಶ್ವರಿ ತಾಯಿ ನೆಲೆಯಿಂದ ವಿಶೇಷ ಕಳೆ ಬಂದಿದೆ. ದಿನೇ ದಿನೇ ಭಕ್ತರ ಸಂಖೈ ಹೆಚ್ಚಾಗುತ್ತಿದ್ದು, ರಾಜ್ಯದ ಮೂಲೆ ಮೂಲೆಗೂ ತಾಯಿ ಮಹಿಮೆ ಹರಡುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಈ ವೇಳೆ ಉದ್ಯಮಿ ಎಂ.ಎನ್.ಜೆ ಮಂಜುನಾಥ್, ಬೈಚಾಪುರ ಗ್ರಾ.ಪಂ ಮಾಜಿ ಸದಸ್ಯ ವೆಂಕಟರೆಡ್ಡಿ, ಮುಖಂಡರಾದ ಜಯರಾಮ್, ಶ್ರೀನಿವಾಸ್, ಸುರೇಶ್, ಜಗದೀಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಯಶಸ್ವಿಗೊಂಡ ಧಾರ್ಮಿಕ ಪೂಜೆಗಳು:
ಚಿಕ್ಕನಹಳ್ಳಿ ಶ್ರೀಮಹಾಶಕ್ತಿ ಮಾರಮ್ಮ ದೇವಿ ಹಾಗೂ ಅಥವರ್ಣ ಭದ್ರಕಾಳಿ ಅಮ್ಮನವರ ವರದಂತಿ ಕಾರ್ಯಕ್ರಮ ಹಾಗೂ 77ನೇ ದಿನದ ಮಂಡಲ ಪೂಜೆ ಅಂಗವಾಗಿ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಡಾ.ಶ್ರೀಹನುಮಂತನಾಥ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಕೇರಳ ವೇದಬ್ರಹ್ಮ ಸಂಗೀತ ಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ದುರ್ಗಾಹೋಮ, ಚಂಡಿ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ಈಗೇ ಹಲವು ಪೂಜೆಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದವು.

ಮಹಾಶಕ್ತಿ ಮಾತೆಯರ ಕೃಪೆ ಇರಲಿ..
ತಮಿಳುನಾಡು ಹಾಗೂ ಕೇರಳದಲ್ಲಿ ಅನೇಕ ಗುರುಗಳ ಬಳಿ ಪಾಂಡಿತ್ಯ ವಿದ್ಯೆಗಳನ್ನು ಅಭ್ಯಾಸ ಮಾಡಿ ದೇವಿಯ ಆರಾಧನೆ ಮಾಡುತ್ತಿರುವ ರಾಜು ಸ್ವಾಮೀಜಿಗಳಿಗೆ ದೇವಿಯ ವಿಶೇಷ ಅನುಗ್ರಹವಿದೆ. ಈ ಸನ್ನಿಧಾನಕ್ಕೆ ಬರುವ ಎಲ್ಲಾ ಭಕ್ತಾದಿಗಳ ಮೇಲೂ ಮಹಾಶಕ್ತಿ ಮಾತೆಯರ ಕೃಪೆ ಸದಾ ಇರಲಿ.
ಶ್ರೀಸಂಗೀತ ಕುಮಾರ ಸ್ವಾಮೀಜಿ, ಕೇರಳ.

ಲೋಕಕಲ್ಯಾಣಾರ್ಥವಾಗಿ ನಡೆದ ಪೂಜೆ..
ಲೋಕಕಲ್ಯಾಣಾರ್ಥವಾಗಿ 77ನೇ ದಿನದ ಮಂಡಲ ಪೂಜೆ, ಅಥವರ್ಣ ಭದ್ರಕಾಳಿ ಅಮ್ಮನವರ ವರದಂತಿ ಕಾರ್ಯಕ್ರಮ ಪೂಜ್ಯ ಗುರುಗಳ ಸಾನಿಧ್ಯದಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಮಳೆ, ಬೆಳೆ ಎಲ್ಲವೂ ಶುಭವಾಗಿ ನಡೆಯಲಿ. ಮೈಸೂರು, ಮುಳಬಾಗಿಲು, ತುಮಕೂರು, ಬೆಂಗಳೂರು ಮತ್ತು ಆಂದ್ರಪ್ರದೇಶ ಭಾಗದಿಂದ ಹಲವಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.
– ರಾಜು ಸ್ವಾಮಿ, ಪ್ರಧಾನ ಅರ್ಚಕ.
– ಶ್ರೀನಿವಾಸ್ ಕೊರಟಗೆರೆ.
