ಕೊರಟಗೆರೆ: ತಾಲ್ಲೂಕಿನ ಸತ್ಯ ಗಣಪತಿ ಮಂಡಳಿ ವತಿಯಿಂದ 66ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಪಿ.ಎನ್. ಕೃಷ್ಣಮೂರ್ತಿ ಅವರು ಸತ್ಯ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನ ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಳಿಕ ನಡೆದ ‘ರತ್ನಮಂಜರಿ’ ನಾಟಕವನ್ನು ವೀಕ್ಷಿಸಿದ ಪಿ.ಎನ್. ಕೃಷ್ಣಮೂರ್ತಿ ಅವರು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿರಿಯರು, ಯುವಕರು ಮತ್ತು ಮಕ್ಕಳಿಗೆ ಮನರಂಜನೆಯೊಂದಿಗೆ ಸಾಮಾಜಿಕ ಒಗ್ಗಟ್ಟಿಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕರು ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಆರಂಭಿಸಿದ್ದರು. ಅದೇ ರೀತಿಯಲ್ಲಿ ಇಂದಿನ ದಿನಗಳಲ್ಲಿ ಗಣೇಶೋತ್ಸವವು ಯುವ ಪೀಳಿಗೆಯನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ಯುವಕರು ಹಾಗೂ ಗ್ರಾಮಸ್ಥರು ಸಂಘಟಿತರಾಗಿ ಗ್ರಾಮಗಳ ಅಭಿವೃದ್ಧಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಗಣೇಶನಿಗೆ ಯಾವುದೇ ಜಾತಿ-ಭೇದವಿಲ್ಲದೆ ಶುಭಕಾರ್ಯಗಳ ಆರಂಭದಲ್ಲಿ ಪ್ರಥಮ ಪೂಜೆ ಸಲ್ಲಿಸಲಾಗುತ್ತದೆ. ಅದೇ ರೀತಿ ಕ್ಷೇತ್ರದ ಎಲ್ಲ ವರ್ಗದ ಜನರು ಪಕ್ಷಭೇದ ಮರೆತು ತಮ್ಮನ್ನು ಪ್ರೀತಿಯಿಂದ ಕಾಣುತ್ತಿರುವುದು ಸಂತಸ ತಂದಿದೆ ಎಂದು ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು.
ನಾಟಕ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ₹50,000 ನಗದು ಪ್ರೋತ್ಸಾಹಧನ ನೀಡಿದರು. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು, ಚಿಕ್ಕರಂಗಯ್ಯ, ಪುಟ್ಟನರಸಪ್ಪ, ಲಂಬೂರಾಜಣ್ಣ, ಲಕ್ಷ್ಮೀನಾರಾಯಣ್, ಚೌಡಪ್ಪ ಸೇರಿದಂತೆ ಹಲವು ಮುಖಂಡರು, ಭಕ್ತರು ಹಾಗೂ ಸತ್ಯ ಗಣಪತಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ, ಹೊಸಕೋಟೆ
