ಕೊರಟಗೆರೆ | ನವೆಂಬರ್ 1, 2025: ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಭಕ್ತಿ ಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ —
“ಕನ್ನಡ ನಾಡು ಅಪಾರ ಇತಿಹಾಸ ಮತ್ತು ವೈವಿಧ್ಯಮಯ ಸಂಸ್ಕೃತಿಯ ನೆಲೆ. ಕುವೆಂಪು ಹೇಳುವಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ. ಕನ್ನಡ ಭಾಷೆಯ ಉಳಿವಿಗಾಗಿ ಮಕ್ಕಳಲ್ಲಿ ಓದು, ಬರಹ, ಸಂಸ್ಕೃತಿಯ ಅರಿವು ಬೆಳೆಸಬೇಕು. ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ, ಜನ್ನ ಮುಂತಾದ ಕವಿಗಳ ಕೃತಿಗಳು ನಾಡಿನ ನಿಜಸ್ವರೂಪವನ್ನು ಪ್ರತಿಬಿಂಬಿಸುತ್ತವೆ,” ಎಂದು ಹೇಳಿದರು.
🎭 ಸಾಂಸ್ಕೃತಿಕ ಸೊಬಗು:
ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಕನ್ನಡ ಸಾಹಿತಿಗಳ ವೇಷಭೂಷಣ ಧರಿಸಿ ಸಾಂಸ್ಕೃತಿಕ ನೃತ್ಯ, ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಸೊಬಗು ತುಂಬಿದರು. ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮ ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್ ಕೆ, ತಾಲ್ಲೂಕು ಪಂಚಾಯತ್ ಇಒ ಅಪೂರ್ವ, ಸಿಪಿಐ ಅನಿಲ್, ತಾಲೂಕು ಅಧಿಕಾರಿಗಳು, ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಜೈ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗೋಪಾಲಕೃಷ್ಣ (ಗೋಪಿ ಏರ್ಟೆಲ್) ಮಾತನಾಡಿ, “ಕನ್ನಡ ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಸದಾ ಸಿದ್ಧನಾಗಿದ್ದೇನೆ. ಮುತ್ತಪ್ಪ ರೈ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವೆ ಮತ್ತು ಹೋರಾಟಗಳಲ್ಲಿ ಯಶಸ್ವಿಯಾಗಿದ್ದೇನೆ. 26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ಗೌರವವಾಗಿದೆ,” ಎಂದು ಹೇಳಿದರು.
📍ವರದಿ: ನರಸಿಂಹಯ್ಯ ಹೊಸಕೋಟೆ
