ಕೊರಟಗೆರೆ:– ರೈತರ ವಿದ್ಯುತ್ ಸಮಸ್ಯೆ ಸೇರಿದಂತೆ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಸಾಧ್ಯವಾದಷ್ಟು ಶೀಘ್ರ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
35ಕ್ಕೂ ಅಧಿಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನಿಮ್ಮೂರಿಗೆ ಬಂದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ರಮವೇ ಪ್ರಜಾಸೇವಾ ಅಭಿಯಾನ. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳೇ ಜನರ ಬಳಿಗೆ ತೆರಳಿ ಸೇವೆ ನೀಡುವುದು ಈ ಕಾರ್ಯಕ್ರಮದ ವಿಶೇಷತೆ ಎಂದು ಹೇಳಿದರು.

*ವಿದ್ಯುತ್ ಸಮಸ್ಯೆಗೆ ಪರಿಹಾರ ಅಗತ್ಯ:*
ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರೇಮಾಮಹಾಲಿಂಗಪ್ಪ ಮಾತನಾಡಿ, ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮವಾದ ಪ್ರಜಾಸೇವಾ ಅಭಿಯಾನವನ್ನು ಗ್ರಾಮೀಣ ಭಾಗದ ಜನರು ಸದುಪಯೋಗಪಡಿಸಿಕೊಳ್ಳಬೇಕು. ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿದಾಗ ಮಾತ್ರ ಇಂತಹ ಅಭಿಯಾನದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಗ್ರಾಮೀಣ ಜನರಿಗೆ ಹಲವು ರೀತಿಯಲ್ಲಿ ನೆರವಾಗಿವೆ. ತೋವಿನಕೆರೆ ಭಾಗದಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸಬೇಕು. ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸಬೇಕು. ವಸತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

*204 ಅರ್ಜಿಗಳ ಸ್ವೀಕಾರ:*
ಪ್ರಜಾಸೇವಾ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 86, ತಾಲೂಕು ಪಂಚಾಯಿತಿಗೆ 87, ಸರ್ವೆ ಇಲಾಖೆಗೆ 8, ಸಣ್ಣ ನೀರಾವರಿಗೆ 7, ಸಮಾಜ ಕಲ್ಯಾಣಕ್ಕೆ 1, ಬೆಸ್ಕಾಂಗೆ 1, ಅರಣ್ಯ ಇಲಾಖೆಗೆ 3, ಆಹಾರ ಇಲಾಖೆಗೆ 6, ಎತ್ತಿನಹೊಳೆ ಯೋಜನೆಗೆ 1, ಕೃಷಿ ಇಲಾಖೆಗೆ 3 ಹಾಗೂ ಪ್ರವಾಸೋದ್ಯಮ ಇಲಾಖೆಗೆ 1 ಅರ್ಜಿ ಸೇರಿದಂತೆ ಒಟ್ಟು 204 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸ್ವೀಕರಿಸಿದ ಅರ್ಜಿಗಳ ಪೈಕಿ 10 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ಉಳಿದ ಅರ್ಜಿಗಳನ್ನು ನಾಲ್ಕು ದಿನಗಳೊಳಗೆ ಪರಿಶೀಲಿಸಿ, ಶೀಘ್ರವಾಗಿ ಇತ್ಯರ್ಥಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಹಶೀಲ್ದಾರ್ ಕೆ. ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಅಪೂರ್ವ, ಸಿಪಿಐ ಪುರುಷೋತ್ತಮ, ಬೆಸ್ಕಾಂ ಜೆಇ ಪ್ರಸನ್ನಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಯಮುನಾ, ಗ್ರೇಡ್–2 ತಹಶೀಲ್ದಾರ್ ವೆಂಕಟರಂಗನ್, ಶಿರಸ್ತೇದಾರ್ ವೆಂಕಟೇಶ್, ಉಪತಹಶೀಲ್ದಾರ್ ಪ್ರತಾಪ್ಕುಮಾರ್, ಪಿಡಿಒ ಸುನೀಲ್, ರವಿಕುಮಾರ್, ರಘುನಂದನ್, ರಂಗನರಸಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾಸೇವಾ ಅಭಿಯಾನ ಗ್ರಾಮೀಣ ಜನರಿಗೆ ವರದಾನವಾಗಲಿ. ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವ ಬದಲು ಅಧಿಕಾರಿಗಳೇ ಜನರ ಬಳಿಗೆ ಬಂದು ಸಮಸ್ಯೆ ಆಲಿಸುವ ವ್ಯವಸ್ಥೆ ವಿಶೇಷವಾಗಿದೆ. ತೋವಿನಕೆರೆಯ ರೈತರ ಸಾಗುವಳಿ ಚೀಟಿ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಬೇಕು.
— ಪ್ರಸನ್ನಕುಮಾರ್, ಮಾಜಿ ಜಿಪಂ ಸದಸ್ಯ, ಸಿ.ಎನ್. ದುರ್ಗ
