ಬಂಡೆಹಳ್ಳಿ, ಜುಂಜರಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಸಿರು ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.

ದೇವಾಲಯಗಳ ಜೀರ್ಣೋದ್ಧಾರಕ್ಕೆ ಆದ್ಯತೆ: ಪಿ.ಎನ್.ಕೆ
ಕ್ಷೇತ್ರದ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಸಿಕೊಂಡಿರುವ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಕುಂದಾಲಮ್ಮ ದೇವಿಗೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮಸ್ಥರನ್ನು ಭೇಟಿ ಮಾಡಿ ಮಾತನಾಡಿದ ಅವರು, “ಕ್ಷೇತ್ರದ ಜನರು ನನ್ನ ಮೇಲಿಟ್ಟಿರುವ ಪ್ರೀತಿ ಹಾಗೂ ನಂಬಿಕೆಗೆ ನಾನು ಚಿರಋಣಿ. ತಾಯಿಯ ಕೃಪೆ ಎಲ್ಲ ಗ್ರಾಮಸ್ಥರ ಮೇಲಿರಲಿ. ಕ್ಷೇತ್ರದ ದೇವಾಲಯಗಳು ಹಾಗೂ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ. ಹಳ್ಳಿಗಳಲ್ಲಿ ನಡೆಯುವ ಪೌರಾಣಿಕ ನಾಟಕ, ಜಾತ್ರೆ ಹಾಗೂ ಹಬ್ಬಗಳಲ್ಲಿ ಭಾಗವಹಿಸುವುದರಿಂದ ನಾವೆಲ್ಲರೂ ಯಾವುದೇ ಭೇದಭಾವವಿಲ್ಲದೆ ಒಂದಾಗಿ ಸಂತೋಷದಿಂದ ಬದುಕಲು ಸಾಧ್ಯ” ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದು, ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು ಮತ್ತು ಬಡವರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು ತಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಜಾತ್ರಾ ಮಹೋತ್ಸವದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜಣ್ಣ, ಸಿದ್ದಗಂಗಯ್ಯ, ಪರಮೇಶ್, ಲಂಬು ರಾಜಣ್ಣ, ಮಾವತ್ತೂರು ಮಂಜುನಾಥ್, ರಂಗಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಪಿ.ಎನ್.ಕೆ. ಅಭಿಮಾನಿಗಳು ಭಾಗವಹಿಸಿದ್ದರು.

ರಸ್ತೆ–ಚರಂಡಿ ಸಮಸ್ಯೆ ತೋರಿಸಿದ ಗ್ರಾಮಸ್ಥರು
ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಪ್ರಮುಖ ಸಮಸ್ಯೆಯಾಗಿರುವ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯ ಕೊರತೆಯನ್ನು ಪಿ.ಎನ್.ಕೆ. ಕೃಷ್ಣಮೂರ್ತಿ ಅವರ ಗಮನಕ್ಕೆ ತಂದರು.
ಅಧಿಕಾರಿಗಳಿಗೆ ಗ್ರಾಮದ ಪರಿಚಯವೇ ಇಲ್ಲವೇ?
ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಮಸ್ಯೆ ಇಂದಿಗೂ ಮುಂದುವರಿದಿದೆ. ಪ್ರತಿವರ್ಷ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದರೂ ಹಳ್ಳಿಗಳ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ.
ಇತ್ತೀಚಿನ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಮತ್ತಷ್ಟು ಹದಗೆಟ್ಟಿದ್ದು, ಹಲವೆಡೆ ಹೊಂಡ–ಗುಂಡಿಗಳು ನಿರ್ಮಾಣವಾಗಿವೆ. ಕೆಲವು ರಸ್ತೆಗಳು ಮಣ್ಣಿನ ರಸ್ತೆಗಳಾಗಿಯೇ ಉಳಿದಿದ್ದು, ಮನೆಗಳ ಸಂಖ್ಯೆ ಹೆಚ್ಚಾದರೂ ಅದಕ್ಕೆ ತಕ್ಕಂತೆ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿಲ್ಲ.
ಗ್ರಾಮದ ಸುತ್ತಮುತ್ತ ಕೃಷಿ ಅವಲಂಬಿತ ಪ್ರದೇಶಗಳಿದ್ದರೂ ಸೂಕ್ತ ರಸ್ತೆ ಸಂಪರ್ಕದ ಕೊರತೆಯಿಂದ ರೈತರು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ರಸ್ತೆಗಳ ನಿರ್ಮಾಣವಾಗಿದ್ದರೂ ಗುಣಮಟ್ಟದ ಕಾಮಗಾರಿ ನಡೆದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಮಳೆಯಿಂದಾಗಿ ಹಲವೆಡೆ ಜಲ್ಲಿಕಲ್ಲುಗಳು ಮೇಲಕ್ಕೆದ್ದು, ವಾಹನ ಸಂಚಾರ ಮಾತ್ರವಲ್ಲದೆ ನಡೆದುಕೊಂಡು ಹೋಗುವುದಕ್ಕೂ ತೊಂದರೆಯಾಗುತ್ತಿದೆ.

ಮಳೆ ಬಂದರೆ ರಸ್ತೆಯೇ ಚರಂಡಿ
“ಮಳೆ ಬಂದಾಗ ಮಣ್ಣಿನ ರಸ್ತೆಯಲ್ಲಿ ನೀರು ಹರಿಯುತ್ತದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಕೊರಟಗೆರೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ನಮ್ಮ ಶಾಸಕರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾಮ ಸಮಸ್ಯೆ ಎದುರಿಸುವಂತಾಗಿದೆ” ಎಂದು ಗ್ರಾಮಸ್ಥೆ ಮಹಾಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ರಸ್ತೆ ಹಾಗೂ ಚರಂಡಿ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ನರಸಿಂಹಯ್ಯ, ಹೊಸಕೋಟೆ
