ಕೊರಟಗೆರೆ:– ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ರಾಮಯ್ಯ ಅವರ ಜಮೀನಿನಿಂದ ವೀರಚೌಡಪ್ಪ ಅವರ ಜಮೀನಿನವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರ್ಇಜಿಎಸ್) ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜಾ ಬಿ.ವಿ. ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿಯ ಗುಣಮಟ್ಟ, ಪ್ರಗತಿ ಹಾಗೂ ಯೋಜನೆಯ ಅನುಷ್ಠಾನವನ್ನು ಅವಲೋಕಿಸಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಆರ್ಥಿಕ ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗ ಕಲ್ಪಿಸುವ ಅವಕಾಶವಿದ್ದು, ಗಂಡು-ಹೆಣ್ಣು ಕಾರ್ಮಿಕರಿಗೆ ಸಮಾನವಾಗಿ ದಿನಕ್ಕೆ ₹382 ಕೂಲಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಜನರು ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜೀವನೋಪಾಯವನ್ನು ಬಲಪಡಿಸಿಕೊಳ್ಳಬೇಕು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕೂಲಿಕಾರ್ಮಿಕರಿಗೆ ಕರೆ ನೀಡಿದರು.

ಪರಿಶೀಲನೆ ವೇಳೆ ಕೂಲಿಕಾರ್ಮಿಕರಿಂದ ಉದ್ಯೋಗದ ಬೇಡಿಕೆ ಸಲ್ಲಿಕೆ, ಹಾಜರಾತಿ ದಾಖಲಾತಿ, ಕಾಮಗಾರಿ ಕಡತಗಳ ನಿರ್ವಹಣೆ ಸೇರಿದಂತೆ ಯೋಜನೆಯ ಆಡಳಿತಾತ್ಮಕ ಅಂಶಗಳನ್ನು ಸಿಇಒ ಪರಿಶೀಲಿಸಿದರು.
ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಒದಗಿಸಬೇಕಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿವೆಯೇ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.

ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳ್ಳಬೇಕು ಹಾಗೂ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ. ಅನಂತರಾಮು, ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಎಂ.ಬಿ. ಗುರುಮೂರ್ತಿ, ತಾಂತ್ರಿಕ ಸಂಯೋಜಕ ಮಧು ಕೆ.ಎಸ್ , ಪಿಡಿಒ ನಾಗರಾಜು ಹಾಗೂ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ
