ಬೆಂಗಳೂರು, ಜೂನ್ 27: ರಾಜಧಾನಿ ಬೆಂಗಳೂರಿನ ಕುರುಬರಹಳ್ಳಿಯ ಕೈಗಾರಿಕಾ ಶೆಡ್ವೊಂದರಲ್ಲಿ ದಾಖಲೆಗಳಿಲ್ಲದೆ ಬಚ್ಚಿಡಲಾಗಿದ್ದ ₹2.98 ಕೋಟಿ ನಗದು ಹಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಜೂನ್ 2ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್ಐ ರಾಕೇಶ್ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಕುರುಬರಹಳ್ಳಿಯ 11ನೇ ಕ್ರಾಸ್ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಶೆಡ್ನಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದ ನಗದು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ದೊರೆಯಿತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಶೆಡ್ನಲ್ಲಿ ಪರಿಶೀಲನೆ ನಡೆಸಿದಾಗ ನಾಲ್ಕು ಬ್ಯಾಗ್ಗಳಲ್ಲಿ ಇರಿಸಲಾಗಿದ್ದ ₹2,98,00,900 ನಗದು ಪತ್ತೆಯಾಯಿತು.
ಪ್ರಾಥಮಿಕ ತನಿಖೆಯಲ್ಲಿ ಈ ಹಣ ತಾವರೆಕೆರೆ ನಿವಾಸಿ ನಾಗರಾಜ್ಗೆ ಸೇರಿದ್ದು, ಅವರು ತಮ್ಮ ಸ್ನೇಹಿತ ವೆಂಕಟೇಶ್ಗೆ ಸೇರಿದ ಶೆಡ್ನಲ್ಲಿ ಹಣವನ್ನು ಇರಿಸಿದ್ದರು ಎಂದು ತಿಳಿದುಬಂದಿದೆ. ಬಳಿಕ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬಂಧಿತರು ವಿಚಾರಣೆ ವೇಳೆ, “ಚಿತ್ರದುರ್ಗದಲ್ಲಿದ್ದ ನಮ್ಮ ಆಸ್ತಿಯನ್ನು ಮಾರಾಟ ಮಾಡಿ ಈ ಹಣವನ್ನು ತಂದಿದ್ದೇವೆ. ಬ್ಯಾಂಕ್ ಸಾಲ ತೀರಿಸಲು ಹಣವನ್ನು ಶೆಡ್ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದೆವು” ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆರೋಪಿಗಳು ಸಲ್ಲಿಸದ ಕಾರಣ, ನಗದು ಮೂಲದ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
