ಮುಂಬೈ, ಆ. 5: ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳ ಜಾಲವಾಗಿರುವ ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ಲಿಮಿಟೆಡ್ನ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಆರಂಭ ಕಂಡಿದೆ. ಕಂಪನಿಯ ಷೇರು ಬಿಎಸ್ಇನಲ್ಲಿ ₹655ಕ್ಕೆ ಪಟ್ಟಿಗೊಂಡಿದ್ದು, ಇದು ಐಪಿಒ ಬೆಲೆಗಿಂತ ಸುಮಾರು ಶೇ.11ರಷ್ಟು ಪ್ರೀಮಿಯಂ ಆಗಿದೆ.
ವ್ಯಾಪಾರದ ವೇಳೆ ಷೇರು ಎನ್ಎಸ್ಇನಲ್ಲಿ ₹675.80 ಹಾಗೂ ಬಿಎಸ್ಇನಲ್ಲಿ ₹676.05 ಗರಿಷ್ಠ ಮಟ್ಟ ತಲುಪಿತು. ದಿನದ ಅಂತ್ಯಕ್ಕೆ ಎನ್ಎಸ್ಇನಲ್ಲಿ ₹663.15 ಹಾಗೂ ಬಿಎಸ್ಇನಲ್ಲಿ ₹666.70ಕ್ಕೆ ವಹಿವಾಟು ಮುಕ್ತಾಯಗೊಂಡಿತು.
ಮೊದಲ ದಿನವೇ ಎನ್ಎಸ್ಇನಲ್ಲಿ 470.08 ಲಕ್ಷ ಷೇರುಗಳು ಹಾಗೂ ಬಿಎಸ್ಇನಲ್ಲಿ 43.91 ಲಕ್ಷ ಷೇರುಗಳು ವಹಿವಾಟಾಗಿವೆ. ಎರಡೂ ಷೇರುಪೇಟೆಗಳಲ್ಲಿ ಒಟ್ಟು ₹3,365.86 ಕೋಟಿ ಮೌಲ್ಯದ ವಹಿವಾಟು ದಾಖಲಾಗಿದೆ.
ದಿನದ ಅಂತ್ಯದ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ (Market Capitalisation) ಬಿಎಸ್ಇನಲ್ಲಿ ₹87,696.20 ಕೋಟಿ ಹಾಗೂ ಎನ್ಎಸ್ಇನಲ್ಲಿ ₹87,229.24 ಕೋಟಿ ತಲುಪಿದೆ.
ಐಪಿಒಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 9,00,88,286 ಷೇರುಗಳ ಆಫರ್ಗೆ ವಿರುದ್ಧವಾಗಿ 44,30,73,025 ಷೇರುಗಳಿಗೆ ಬಿಡ್ಗಳು ಬಂದಿವೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ (QIB) ವಿಭಾಗ 8.25 ಪಟ್ಟು, ಚಿಲ್ಲರೆ ಹೂಡಿಕೆದಾರರ ವಿಭಾಗ 0.93 ಪಟ್ಟು, ಸಂಸ್ಥೇತರ ಹೂಡಿಕೆದಾರರ (NII) ವಿಭಾಗ 1.02 ಪಟ್ಟು ಹಾಗೂ ಉದ್ಯೋಗಿಗಳ ಮೀಸಲು ವಿಭಾಗ 2.19 ಪಟ್ಟು ಚಂದಾದಾರಿಕೆ ಕಂಡಿದೆ.
ಕಂಪನಿಯ ಬಗ್ಗೆ
ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ದೇಶದಾದ್ಯಂತ ಬಹುವಿಶೇಷತೆ ಆಸ್ಪತ್ರೆಗಳ ಜಾಲವನ್ನು ಹೊಂದಿದ್ದು, ಹೊರರೋಗಿ ಸೇವೆಯಿಂದ ಹಿಡಿದು ಅತ್ಯಾಧುನಿಕ ತೃತೀಯ ಮತ್ತು ಚತುರ್ಥ ಹಂತದ ಚಿಕಿತ್ಸೆಗಳವರೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
2026ರ ಮಾರ್ಚ್ 31ರ ವೇಳೆಗೆ ಕಂಪನಿಯು 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 49 ಆಸ್ಪತ್ರೆಗಳು ಹಾಗೂ 13,037 ಪರವಾನಗಿ ಪಡೆದ ಹಾಸಿಗೆಗಳ ಜಾಲವನ್ನು ಹೊಂದಿದೆ. ಹಾಸಿಗೆ ಸಾಮರ್ಥ್ಯದ ಆಧಾರದ ಮೇಲೆ ಇದು ಭಾರತದ ಅತಿದೊಡ್ಡ ಖಾಸಗಿ ಬಹುವಿಶೇಷತೆ ಆಸ್ಪತ್ರೆಗಳ ಜಾಲವಾಗಿದ್ದು, ಆಸ್ಪತ್ರೆಗಳ ಸಂಖ್ಯೆಯಲ್ಲಿ ಎರಡನೇ ಅತಿದೊಡ್ಡ ಖಾಸಗಿ ಆಸ್ಪತ್ರೆ ಸರಣಿಯಾಗಿದೆ.
2025-26 ಹಣಕಾಸು ವರ್ಷದಲ್ಲಿ ಕಂಪನಿಯ ಕಾರ್ಯಾಚರಣೆಯಿಂದ ₹10,329.75 ಕೋಟಿ (ಪ್ರೊ-ಫಾರ್ಮಾ ಆಧಾರದ ಮೇಲೆ ₹10,933.63 ಕೋಟಿ) ಆದಾಯ ದಾಖಲಾಗಿದ್ದು, ಇದು ಭಾರತದ ಖಾಸಗಿ ಆಸ್ಪತ್ರೆಗಳ ಪೈಕಿ ಎರಡನೇ ಅತಿ ಹೆಚ್ಚಿನ ಆದಾಯವಾಗಿದೆ.
ಕರ್ನಾಟಕ, ಮಹಾರಾಷ್ಟ್ರ-ಗೋವಾ ಹಾಗೂ ಪಶ್ಚಿಮ ಬಂಗಾಳ-ಒಡಿಶಾ-ಜಾರ್ಖಂಡ್-ಸಿಕ್ಕಿಂ ಪ್ರದೇಶಗಳಲ್ಲಿ ಕಂಪನಿಯು ಕ್ರಮವಾಗಿ 6,404, 2,188 ಮತ್ತು 2,887 ಪರವಾನಗಿ ಪಡೆದ ಹಾಸಿಗೆಗಳನ್ನು ಹೊಂದಿದೆ.
