ಸರ್ಕಾರಿ ಸಿಬ್ಬಂದಿಗಳಿಗೆ ವಿವಿಧ ಬ್ಯಾಂಕ್ಗಳು ಒದಗಿಸುವ ಸಂಬಳ ಪ್ಯಾಕೇಜ್ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿ ಈಗಾಗಲೇ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕ್ಗಳು ಒದಗಿಸುವ ಸಂಬಳ ಪ್ಯಾಕೇಜ್ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಇನ್ನೂ ಬ್ಯಾಂಕ್ಗಳು ಅಥವಾ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ ಹಾಗೂ ನೌಕರರಿಗೆ ಸಂಬಂಧಿತ ಇಲಾಖೆ ಉತ್ತೇಜಿಸಬೇಕು. ಬ್ಯಾಂಕ್ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ ಹಾಗೂ ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸುವಂತೆ ಆದೇಶಿಸಲಾಗಿದೆ.
ನಿನ್ನೆ(ಏಪ್ರಿಲ್ 15, ಮಂಗಳವಾರ) ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿಗಳಾದ ವಿಶಾಲ್ IAS ಅವರೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರುಗಳೊಂದಿಗೆ ಸಂಬಳ ಪ್ಯಾಕೇಜ್ ಖಾತೆಯ ಮೂಲಕ ಸರ್ಕಾರಿ ನೌಕರರಿಗೆ ಹೆಚ್ಚು ರಿಯಾಯಿತಿ, ಸೌಲಭ್ಯಗಳನ್ನು ನೀಡುವುದರ ಬಗ್ಗೆ ಸಭೆ ನಡೆಸಲಾಯಿತು
ಹಲವು (8-10) ರಾಷ್ಟ್ರಿಕೃತ ಬ್ಯಾಂಕ್ ತಜ್ಞರ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ವೇತನ ಪ್ಯಾಕೇಜ್, ಗೃಹ ಸಾಲ,ವಾಹನ ಸಾಲ, ವೈಯಕ್ತಿಕ ಸಾಲ ಕಡಿಮೆ ಬಡ್ಡಿ ದರದಲ್ಲಿ (ROI) ನೀಡುವ ಬಗ್ಗೆ ಕೆಲವು ವಿಮಾ ಯೋಜನೆಯಗಳ ಚಚಿ೯ಸಲಾಗಿದೆ. ಅದರಲ್ಲಿ ಕೆಲವು ಬ್ಯಾಂಕುಗಳು ಬಡ್ಡಿ ದರ, ರಿಯಾಯಿತಿ ನೀಡಲು ಸಮ್ಮತಿಸಿರುತ್ತವೆ. ಇನ್ನೂ ಕೆಲವು ಬ್ಯಾಂಕು ಗಳು ರಿಯಾಯಿತಿ ಬಡ್ಡಿ ದರದಲ್ಲಿ ಸಾಲನೀಡಲು 4-5 ದಿನಗಳ ಸಮಯ ತೆಗೆದುಕೊಂಡಿವೆ ಎಂದು ತಿಳಿದು ಬಂದಿದೆ.
ವೇತನ ಪ್ಯಾಕೇಜ್ ಕುರಿತು ನಮ್ಮ ರಾಜ್ಯ ಸರಕಾರಿ ನೌಕರರ ಸಂಘದ ಯಾವ ಬ್ಯಾಂಕ್ ಬೆಸ್ಟ್ ಪ್ಯಾಕೇಜ್ ನೀಡುತ್ತದೆ ಎಂಬುದನ್ನು ತಮಗೆ ತಿಳಿಸಲಾಗುವುದು ಅದರಂತೆ ತಾವುಗಳು ಬ್ಯಾಂಕ್ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಲು ಕೋರಿದೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿಗಳಾದ ಶ್ರೀ ಗಿರಿ ಗೌಡ ಎಚ್, ಗೌರವಾಧ್ಯಕ್ಷರಾದ ಬಸವರಾಜ್ ಎಸ್ ಉಪಾಧ್ಯಕ್ಷರುಗಳಾದ ಶ್ರೀ ಹರ್ಷ, ಶ್ರೀ ಸದಾನಂದ ನೆಲಕುದ್ರಿ ಉಪಸ್ಥಿತರಿದ್ದರು.
ಏಪ್ರಿಲ್ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ: ದಿವ್ಯಪ್ರಭು
ಧಾರವಾಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಯೋಜನವಾಗುವ ಸಂಬಳ ಪ್ಯಾಕೇಜ್ ಖಾತೆ ಹೊಂದಬೇಕು. ಈ ಕುರಿತು ಆಯಾ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಖಾತೆಯ ಕ್ರಮ ವಹಿಸಿ, ಏಪ್ರಿಲ್ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಹಾಗೂ ನೌಕರರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಅಧಿಕಾರಿಗಳ ವಿಶೇಷ ಸಭೆ ಜರುಗಿಸಿದ ಅವರು, ಸರ್ಕಾರದಿಂದ ನೇರವಾಗಿ ಮತ್ತು ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ, ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನೌಕರ ತನ್ನ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಮಾಡಿಸಿಕೊಂಡರೆ ಉಚಿತವಾಗಿ ಒಂದು ಕೋಟಿ ಮೊತ್ತದ ವಿಮೆ ಲಭ್ಯವಾಗುತ್ತದೆ ಮತ್ತು ಎಟಿಎಂ, ಚೆಕ್ ಬುಕ್, ಎಸ್.ಎಂ.ಎಸ್. ಸೇರಿದಂತೆ ವಿವಿಧ ಅಗತ್ಯ ಸೇವೆಗಳು ಉಚಿತವಾಗಿ ದೊರೆಯುತ್ತವೆ ಎಂದರು.
