ಲೋಕಾಭಿಪ್ರಾಯವಾಗಿ ಒಂದು ಮಾತಿದೆ “ಬಿಡಪ್ಪ ನಿನ್ ಮೈಂಡು ಪಾದರಸ ಇದ್ದಂಗೆ”. ಈ ಪದಗಳ ಕೊಂಡಿಯ ಅರ್ಥವಾದರೂ ಏನು? ಈ ವಿಷಯ ಕುರಿತು ನನ್ನದೇ ಆದ ಅರ್ಥವನ್ನು ನೀಡುವ ಪ್ರಯತ್ನ ಮಾಡುವೆ. ಮನಸ್ಸು ಮತ್ತು ಫನ ವಸ್ತುಗಳ ಸಂಪರ್ಕ ಏರ್ಪಡಿಸುವ (ಇಂಟರ್ ಫೇಸ್) ವಿಚಾರ ಕುರಿತಂತೆ ವ್ಯಾಖ್ಯಾನಿಸುವಾಗ ನಾವು ಯಾವುದೇ ವಿಷಯವನ್ನು ಧಾರಣೆ ಮಾಡಿದ ನಂತರ ಹೇಗೆ ಹೀರಿಕೊಳ್ಳಬಹುದು ಎಂಬುದರ ಬಗ್ಗೆ. ಅಂದರೇ ಹೀರಕೊಳ್ಳಬಹುದು ಅಥವಾ ಹೀರಕೊಳ್ಳದೇ ಸಹ ಇರಬಹುದು. ಈ ವಿಚಾರವನ್ನು ಮಂಡಿಸುವಾಗ “ಪಾದರಸ” ನನಗೆ ನೆನಪಾಗುತ್ತದೆ.
ಪಾದರಸ ಒಂದು ದ್ರವ್ಯ ಧಾತು. ಈ ದ್ರವ್ಯ ನಮ್ಮ ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯ. ಈ ವಸ್ತು ನಮ್ಮ ಕೈಗೆ ಅಂಟುಕೊಳ್ಳುವುದಿಲ್ಲ. ಈ ದ್ರವ್ಯದ ಲಕ್ಷ್ಮಣ ನುಣಚಿಕೂಳ್ಳುವಂತಾದ್ದು ಮತ್ತು ವಿಭಿನ್ನವಾದದ್ದು. ಈ ದ್ರವ್ಯದ ರಸಾಯನಿಕ ಗುಣ ವಿಷೇಶತೆ ಏನೆಂದರೆ ಯಾವುದೇ ಭೌತ ವಸ್ತುಗಳ ಜೊತೆ ಸುಲಭವಾಗಿ ಮಿಶ್ರಣವಾಗುವುದಿಲ್ಲ ಮತ್ತು ಈ ದ್ರವ್ಯದ ಮೇಲೆ ಫನ ವಸ್ತುಗಳು ಇಟ್ಟರೆ ತೇಲುತ್ತವೆ ಅಥವಾ ಮುಳಿಗಿದರೂ ಅಂಟಿಕೊಂಡಿರುವುದಿಲ್ಲ. ಪಾದರಸ ಯಾವುದೇ ಜಾಗದಲ್ಲಿ ಸುಲಭವಾಗಿ ಹಾಗು ಚುರುಕಾಗಿ ಹರಿಯುವಂತಹ ದ್ರವ್ಯ. ಪಾದರಸದ ಮತ್ತೊಂದು ಗುಣವೆಂದರೆ ಸೂಕ್ಷ್ಮತೆಯ ಪ್ರತೀಕ.
ಈಗ ನಮ್ಮ ಮನಸ್ಸಿನ ಬಗ್ಗೆ ಅವಲೋಕನ ಮಾಡೋಣ. ನಮ್ಮ ಮನಸ್ಸು ಸೂಕ್ಷ್ಮ ಮತ್ತು ಪಾದರಸದಂತೆ. ಯಾವುದೇ ಸಂದರ್ಭದಲ್ಲೂ ಜಗತ್ತಿನ ತುಂಬಾ ಬಹು ಬೇಗ ಮನಸ್ಸು ಆವರಿಸಿಬಿಡುತ್ತದೆ. ಸಾಮನ್ಯವಾಗಿ ಮನಸ್ಸು ಯಾವುದೇ ವಸ್ತುಗಳ ಜೊತೆ ಅಂಟಿಕೊಂಡಿರುವುದಿಲ್ಲ. ಆದರೆ ಕೆಲವೊಮ್ಮೆ ವಸ್ತುವಿನ ಜೊತೆ ಅತಿಯಾಗಿ ಬಂಧನಕ್ಕೆ ಒಳಗಾಗಿರುತ್ತದೆ. ಧನ, ಆಭರಣ, ಆಸೆ, ಕುರ್ಚಿ ಹೀಗೆ. ಇದರಿಂದಾಗಿ ದಾರ್ಶನಿಕರು ಮನಸ್ಸನ್ನು ಪಾದರಸಕ್ಕೆ ಹೋಲಿಸುತ್ತಾರೆ.
ಮೊದಲೇ ಹೇಳಿದಂತೆ ಪಾದರಸದ ಗುಣ ಮತ್ತು ಲಕ್ಷಣ ಯಾವುದೇ ವಸ್ತುವಿನ ಜೊತೆ ಸೇರದಿದ್ದರೂ ಇಡೀ ಜಾಗವನ್ನು ಆವರಿಸುವ ಸಾಮರ್ಥ್ಯ ಇದೆ. ಇದೇ ತರಹ ಮನಸ್ಸು ಕೂಡ. ಆದರೇ ಈ ಪಾದರಸದ ಜೊತೆ ಯಾವಾಗ ಪರಿವರ್ತಕವನ್ನು (ವೇಗವರ್ಧಕ) ಸೇರಿಸಿದಾಗ ಅಥವ ರಸಾಯನಿಕ ಕ್ರಿಯೆಗೆ ಅಳವಡಿಸಿದಾಗ ಪಾದರಸ ಅನೇಕ ಫನ ವಸ್ತುಗಳ ಜೊತೆ ಬೆರೆತು ಹೊರ ಬಂದಂತಾ ವಸ್ತುವನ್ನು ದಂತವೈದ್ಯ ಶಾಸ್ತ್ರದಲ್ಲಿ ಮತ್ತು ಬಲ್ಬ್ ತಯಾರಿಕೆಯಲ್ಲಿ ಉಪಯೋಗಿಸುವರು.
ಮನಸ್ಸು ಅನೇಕರಲ್ಲಿ ಜಟಿಲ ಮತ್ತು ಕಾರ್ಕೋಟ. ಮಾಡಿದರಾಯಿತು ಎನ್ನುವ ಮನೋಭಾವ, ನಾನು ಮತ್ತು ನನ್ನದೇ ಎನ್ನುವ ನಿಲವುಗಳು. ಧರ್ಮ, ಜಾತಿ, ರಾಜಕೀಯ ವ್ಯವಸ್ಥೆಗಳ ತಾರತಮ್ಯ ಮತ್ತು ನಿರ್ಧಾರಗಳ ಸಮಸ್ಯೆಗಳು. ಒಲವು, ಪ್ರೇಮ, ಅನುಕರಣೆ ಇಲ್ಲದೇ ಇರುವುದು. ಜಡತ್ವ, ಉದಾಸೀನ, ಹುಮ್ಮಸ್ಸು ಕಾಣದೇ ಇರುವುದು. ಇಂತಹ ಮನೋಭಾವ ಉಳ್ಳವರು ತಮ್ಮ ಮನಸ್ಸನ್ನು ಸೂಕ್ಷ್ಮವಾಗಿ ಯಾವ ಮನಸ್ಸಿನ ಅಥವ ವಸ್ತುವಿನ ಜೊತೆ ಬೆರೆಸುವರು? ಪಾದರಸ ಎಷ್ಟು ಸೂಕ್ಷ್ಮವೋ ಅಷ್ಟೇ ಕಾರ್ಕೋಟಕ. ನಮ್ಮ ಮನಸ್ಸು ಸಹ ಇದನ್ನೇ ಹೋಲುವುದು. ಆದುದರಿಂದ ಇಂತಹ ಮನಸ್ಸುಗಳನ್ನು ಪರಿವರ್ತಿಸಿ ಒಳ್ಳೆಯ ಜೀವಿಗಳನ್ನಾಗಿ ಪರಿವರ್ತಿಸಬಹುದೇ?
ಪಾದರಸ ನಮ್ಮ ಚರ್ಮದ ರಂದ್ರಗಳಿಂದ ರಕ್ತ ನಾಳವನ್ನು ಸೇರಿ ಅನೇಕ ನರ ದೌರ್ಬಲ್ಯಗಳನ್ನು ತರುತ್ತದೆ. ಹಾಗೆಯೇ ಮನಸ್ಸು ಕೂಡ. ತರವಲ್ಲದ ಮನಸ್ಸುಗಳು ಒಳ್ಳೆಯ ಮನಸ್ಸುಗಳ ಜೊತೆ ಸೇರಿ ಮನೋ ಕಾಯಿಲೆಗಳನ್ನು ತರಿಸಬಹುದು. ಆದುದರಿಂದ ತರವಲ್ಲದ ಮನಸ್ಸುಗಳನ್ನು ಸರಿ ಪಡಿಸಬಹುದೇ? ಅಂತಹ ಪರಿವರ್ತಕಗಳು ಇರಬಹುದಾ? ನಾನು ಮನೋ ವೈದ್ಯನಾದ್ದರಿಂದ ಆ ಪರಿವರ್ತಕಗಳನ್ನು ಕಂಡು ಕೊಂಡಿರುವೆ. ಸಂಕ್ಷಿಪ್ತವಾಗಿ ಅವುಗಳು ಯಾವುದೆಂದರೆ..
ಅಲ್ಪ ಬುದ್ಧಿವಂತಿಕೆ
ಕೊಂಚ ಒಳ್ಳೆಯತನ
ಸ್ವಲ್ಪ ನಂಬಿಕೆ
ಸಾಸಿವೆಯಷ್ಟು ಸೃಜನಶೀಲತೆ
ಬಹು ಕೇಂದ್ರಿಕೃತತ್ವ
ಒಳ್ಳೆಯ ಗಮನವಿರುವಿಕೆ
ನ್ಯಾಯೋಜಿತ ಆತ್ಮ ವಿಶ್ವಾಸ
ಉತ್ತಮ ದೃಷ್ಟಿ (ಅತ್ಯುತ್ತಮ ದೂರ ದೃಷ್ಟಿ)
ಈ ಎಂಟು ಧಾರಣೆಗಳನ್ನು ಅಥವ ಪರಿವರ್ತಕಗಳನ್ನು ಯಾರು ಉಪಯೋಗಿಸುತ್ತಾರೋ ಅವರುಗಳು ತಮ್ಮ ತಮ್ಮ ಜೀವನದಲ್ಲಿ ಬದುಕಿನ ಶ್ರೇಷ್ಠತೆಯನ್ನು ಹೊಂದುವರು.
ಭಗವಾನ್ ಬುದ್ಧರು “ಕೇಳಿದ್ದನ್ನು ಮತ್ತು ನೋಡಿದ್ದನ್ನು ಧಾರಣೆ ಮಾಡಿ ನ್ಯಾಯ ಸಮ್ಮತವಾಗಿ ಅರ್ಥೈಸಿ ಧರಿಸುವಂತನಾಗು” ಎಂದಿದ್ದರು. ಮಾನವನ ಏಳಿಗೆಗೆ ಮನಸ್ಸು ಕಂಡುಕೊಂಡ ಮೌಲ್ಯಮಾಪನ ಮತ್ತು ಬದುಕಿನಲ್ಲಿ ಕಾಣುವ ಸದ್ಗುಣಗಳ ನಡುವೆ ತಾಂತ್ರಿಕ ಸಂಪರ್ಕ ಏರ್ಪಡಿಸಿದರೆ ಅತ್ಯುತ್ತಮ. ಈ ಸಂಪರ್ಕಕ್ಕೆ ಬೇಕಾಗಿರುವುದು ಅಷ್ಟ ಪರಿವರ್ತಕ ಸಾಧನೆಗಳು. ಇದು ಬದುಕಿನಲ್ಲಿ ಕಾಣುವಂತಾದು. ಯಾವಾಗ ನಾವು ನಮ್ಮಮೌಲ್ಯಗಳನ್ನು ಸದ್ಗುಣ ಕಾರ್ಯಗಳಲ್ಲಿ ಅಳವಡಿಸುತ್ತೇವೂ ಅಂದು ನಾವು ಸಂಪೂರ್ಣತೆಯನ್ನು ಹೊಂದುವೆವು.
“ಸಾಂಖ್ಯಾ ತತ್ವ (Sankhya philosophy)” ಹೇಳುವುದು ಏನೆಂದರೆ ನಮ್ಮ ಈ ವಿಶ್ವ ವಾಸ್ತವಾಗಿ ಎರಡು ಸಂಯೋಜಕಗಳಿಂದ ಕೂಡಿರುತ್ತದೆ. ಒಂದು ಪುರಷಾರ್ತ (ಮನಸ್ಸು) ಮತ್ತು ಇನ್ನೊಂದು ಪ್ರಕೃತಿ (ವಸ್ತು). ಇವರೆಡರ ಮಧ್ಯೆ ಜೀವಾತ್ಮಗಳು (ನಾವುಗಳು), ಪುರಷಾರ್ತ ಮತ್ತು ಪ್ರಕೃತಿಯ ನಡುವಿನ ಕೊಂಡಿಗಳಷ್ಟೆ. ಒಂದಲ್ಲ ಒಂದು ತರದಲ್ಲಿ ಅಥವ ಯಾವುದೋ ರೂಪದಲ್ಲಿ ನಾವುಗಳು ಇವರೆಡರ ಮಧ್ಯೆ ಬಂಧನಕ್ಕೆ ಒಳಗಾಗಿರುತ್ತೇವೆ. ಪ್ರಕೃತಿಯನ್ನು ಅರ್ಥೈಸಿ, ಸಹ ಬಾಳ್ವೆ ಮತ್ತು ಸಹೃದಯತ್ವಕ್ಕೆ ಪೂರಕವಾಗಿಸಿಗೊಳ್ಳುತೇವೊ ಅದನ್ನು MIND AND MATTER INTERPHASE (ಮನಸ್ಸು ಮತ್ತು ವಸ್ತುವಿನ ನಡುವೆ ಸಂಪರ್ಕ) ಎಂದೆನ್ನುತ್ತೇವೆ. ಈ ಸಮೀಕರಣವನ್ನು SELF ENGINEERING ( ಸ್ವಯಂ ತಾಂತ್ರಿಕತೆ) ಎಂದು ಸಹ ಕರೆಯಬಹುದು….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

