ಹಾಸನ: ಹಾಸನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು–ಹಾಸನ–ಬೆಂಗಳೂರು, ಮೈಸೂರು–ಹಾಸನ–ಮೈಸೂರು, ಮಂಗಳೂರು–ಹಾಸನ–ಮಂಗಳೂರು ಹಾಗೂ ಹುಬ್ಬಳ್ಳಿ–ಹಾಸನ–ಹುಬ್ಬಳ್ಳಿ ಮಾರ್ಗಗಳಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 12ರವರೆಗೆ ವಿಶೇಷ ರೈಲುಗಳನ್ನು ಓಡಿಸುವಂತೆ ಅವರು ಕೋರಿದ್ದಾರೆ.
ಹಾಸನ ಮಾರ್ಗವಾಗಿ ಸಂಚರಿಸುವ ನಿಯಮಿತ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸುವುದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮುಂಜಾನೆ ಮತ್ತು ತಡರಾತ್ರಿ ರೈಲು ಸೇವೆಗಳನ್ನು ಒದಗಿಸುವುದು ಹಾಗೂ ಹಾಸನ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಟಿಕೆಟ್ ಮತ್ತು ವಿಚಾರಣಾ ಕೌಂಟರ್ಗಳನ್ನು ತೆರೆಯುವಂತೆಯೂ ಮನವಿ ಮಾಡಿದ್ದಾರೆ.
ನಿಲ್ದಾಣದಲ್ಲಿ ಸಾಕಷ್ಟು ಆರ್ಪಿಎಫ್ ಸಿಬ್ಬಂದಿ, ವೈದ್ಯಕೀಯ ನೆರವು, ಜನಸಂದಣಿ ನಿರ್ವಹಣೆ, ಕುಡಿಯುವ ನೀರು, ಸ್ವಚ್ಛತೆ ಮತ್ತು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ರೈಲುಗಳ ಮಾರ್ಗ, ಸಮಯ ಮತ್ತು ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ಮಾಹಿತಿಯನ್ನು ಮುಂಚಿತವಾಗಿ ಪ್ರಕಟಿಸಬೇಕು ಎಂದು ಸಂಸದರು ಕೋರಿದ್ದಾರೆ.
ಪ್ರಯಾಣಿಕರ ಬೇಡಿಕೆ ಮತ್ತು ಕಾರ್ಯಾಚರಣೆಯ ಸಾಧ್ಯತೆಗಳನ್ನು ತಕ್ಷಣ ಪರಿಶೀಲಿಸಿ, ಪ್ರಸ್ತಾವನೆಯನ್ನು ನೈರುತ್ಯ ರೈಲ್ವೆ ಮುಖ್ಯ ಕಚೇರಿಗೆ ಸಲ್ಲಿಸುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೂ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಕ್ರಮಗಳು ಭಕ್ತರಿಗೆ ಸುರಕ್ಷಿತ ಹಾಗೂ ಅನುಕೂಲಕರ ಪ್ರಯಾಣ ಒದಗಿಸುವುದರ ಜೊತೆಗೆ ಮಹೋತ್ಸವದ ಅವಧಿಯಲ್ಲಿ ರಸ್ತೆ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿವೆ ಎಂದು ಸಂಸದರು ತಿಳಿಸಿದ್ದಾರೆ.
