ತುಮಕೂರು: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶಕುಮಾರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು ಹಾಗು ಎಸ್.ಐ.ಆರ್. ಪ್ರಕ್ರಿಯೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಜನಪರ ಚಳವಳಿಗಾರರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಜಿ.ಚಂದ್ರಶೇಖರಗೌಡ ಮಾತನಾಡಿ,ಜ್ಞಾನೇಶಕುಮಾರ್ ಎಂಬ ಅಜ್ಞಾನಿ ಮಾಡಿದ ಕೆಲಸದ ವಿರುದ್ಧ ಇಂದು ಇಡೀ ದೇಶದಾದ್ಯಂತ ಪ್ರತಿಭಟನೆಗಳು ಜರುಗುತ್ತಿವೆ.ಎಸ್.ಐ.ಆರ್. ಹೆಸರಿನಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ.ಈ ಹೋರಾಟ ನಗರ ಮಟ್ಟಕ್ಕೆ ಸಿಮೀತವಾಗದೆ ಹಳ್ಳಿ ಹಳ್ಳಿಗಳಿಗೂ ತೆಗೆದುಕೊಂಡು ಹೋಗುತ್ತೇವೆ.ಬಿಜೆಪಿ ಮತ್ತು ಆರ್.ಎಸ್.ಎಸ್.ಹುನ್ನಾರವನ್ನು ದೇಶದ ಜನರ ಮುಂದಿಡುತ್ತೇವೆ.ಜ್ಞಾನೇಶಕುಮಾರ್ ರಾಜೀನಾಮೆ ಕೊಡುವವರೆಗೆ, ಇಲ್ಲವೇ ರಾಷ್ಟ್ರಪತಿಗಳು ಅವರನ್ನು ವಜಾ ಮಾಡುವವರೆಗೂ ಇಂಡಿಯಾ ಮೈತ್ರಿಕೂಟದಎಲ್ಲಾ ಪಕ್ಷಗಳ ಹೋರಾಟ ಮುಂದುವರೆಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹಮದ್ ಮಾತನಾಡಿ, ಎಸ್. ಐ.ಆರ್.ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲಾಗಿದೆ.ಮುಖ್ಯಚುನಾವಣಾ ಆಯುಕ್ತರ ಮಾಡಿರುವುದು ದೇಶದ್ರೋಹದ ಕೆಲಸ.ಹಾಗಾಗಿ ಅವರನ್ನು ಈ ಕೂಡಲೇ ವಜಾ ಮಾಡಬೇಕು.ಇಂಡಿಯಾ ಒಕ್ಕೂಟದ ಸಂಪ್ರದಾಯಕ ಮತಗಳಾದ ಅಹಿಂದ ಮತಗಳನ್ನು ಕಿತ್ತು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ.12 ವರ್ಷಅಧಿಕಾರದಲ್ಲಿದ್ದೂ ನಸುಳುಕೋರರಿಗೆ ಅವಕಾಶ ಕಲ್ಪಿಸಿದ್ದು, ಕೇಂದ್ರ ಸರಕಾರದ ವೈಫಲ್ಯ.ಹಾಗಾಗಿ ಪ್ರಧಾನಿ ಮತ್ತು ಗೃಹ ಸಚಿವರೂ ರಾಜೀನಾಮೆ ನೀಡಬೇಕೆಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶಕುಮಾರ್ ಅವರ ತಪ್ಪುಗಳನ್ನು ಎತ್ತಿ ಹಿಡಿದು ಪ್ರಶ್ನಿಸಿದ ಲೋಕಸಭೆಯ ವಿರೋಧಪಕ್ಷದ ನಾಯಕರಾದ ರಾಹುಲ್ಗಾಂಧಿ ಅವರನ್ನು ಅತ್ಯಂತ ನಿರ್ಲಕ್ಷದಿಂದ ಕಂಡಿರುವುದಲ್ಲದೆ, ಪ್ರತಿಭಟನೆ ನಡೆಸಿದ್ದಕ್ಕೆ ಎಫ್.ಐ.ಆರ್.ದಾಖಲಿಸಲಾಗುತ್ತಿದೆ.ಮತ್ತೊಂದು ಸುತ್ತಿನ ಸ್ವಾತಂತ್ರ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗುವ ಅನಿವಾರ್ಯತೆ ಇದೆ ಎಂದರು.
ಅಮ್ಆದ್ಮಿ ಪಕ್ಷದಜಯರಾಮಯ್ಯ, ಸಿಪಿಐ(ಎಂ)ನ ಸೈಯದ್ ಮುಜೀಬ್, ಸಿಪಿಐನ ಗಿರೀಶ್ ಮಾತನಾಡಿದರು,ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ಎಸ್.ಷಫಿಅಹಮದ್,ನರಸೀಯಪ್ಪ, ನಿಂಗರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್,ಫಯಾಜ್, ಮೆಹಬೂಬ್ ಪಾಷ, ಆಟೋರಾಜು, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
– ಚಂದ್ರಚೂಡ ಕೆ.ಬಿ.
