ಆಗ ಇದ್ದಕ್ಕಿದ್ದಂತೆ ಕೇಪಿನ ಕೋವಿ ಹಿಡಿದು ಗುಟ್ರುನಕ್ಕಿ ಶಿಕಾರಿಗೆ ಹೊರಟಿದ್ದ ಮೊಗಣ್ಣ ಪ್ರತ್ಯಕ್ಷನಾಗಬೇಕೇ? ‘ಯಾವನ್ರಲ್ಲಾ ಅವನು ನಮ್ಮೂರೊಳಗೆ ಬಂದಿರೋದು. ಸರ್ಕಾರಿ ಸೂಳೇಮಕ್ಳು ಊರೊಳಗೆ ಬರಕೂಡದೆಂದು ಊರಬಾಗಿಲಲ್ಲೇ ಬೋರ್ಡ್ ಹಾಕಿಲ್ವಾ ನಾವು ರೈತ ಸಂಘದವರು’ ಎಂದವನೇ ಸಿವಿಲ್ ಡ್ರೆಸ್ನಲ್ಲಿದ್ದ ಎಕ್ಸೈಸ್ನವನೊಬ್ಬನನ್ನು ಎದೆಹಿಡಿದು ದೂಕಿ ಬೀಳಿಸಿದ.
ಯಾರಿಗೂ ಹೊಡೆಯಲು ಅವಕಾಶ ಸಿಗದೇ ಹಪಹಪಿಸಿ ಬೇಸತ್ತಿದ್ದ ಅನೇಕ ಸ್ಕ್ವಾಡ್ ಹುಡುಗರು ಸಿಕ್ಕಿದ್ದೇ ಛಾನ್ಸ್ ಎಂದುಕೊಂಡು, ‘ಹಾಕ್ಕು ಆ ನನ್ಮಗ್ನಿಗೆ’ ಎಂದವರೇ ಮೊಗಣ್ಣನ ಮೇಲೆ ಹಾರಿದರು. ಇದೇ ಸಮಯ ಕಾಯುತ್ತಿದ್ದ ಡೀಸೀ ಸುಬ್ಬ ಸಾರಾಯಿ ಬೇಯುತ್ತಿದ್ದ ಕಡುಬಿನ ಕಳಸಿಗೆಯನ್ನು ಒಲೆಯಿಂದ ಕೆಡವಿ ಉರುಳಿಸಿ ಈಚಲುಹರಕ್ಕೆ ಹಾರಿ ಮಾಯವಾದ.
ಸಂಜೀವ ತಾನೊಂದು ಬಡಿಗೆ ಹಿಡಿದು ಮೊಗಣ್ಣನನ್ನು ಬಿಡಿಸಲು ಗುಂಪಿನ ಮೇಲೆ ನೆಗೆದ. ಜಬ್ಬ ಸಿಕ್ಕಿದಷ್ಟು ಸಿಕ್ಕಲಿ ಎಂದು ಕ್ಯಾನ್ ಎತ್ತಿಕೊಂಡು ನೀರ್ಕಾಸ್ಕೊಳ ದಬ್ಬಲಿನೊಳಗೆ ಅಂತರ್ಧಾನನಾದ. ಈ ಗಲಾಟೆಯಲ್ಲಿ ಭಾರೀ ಪೆಟ್ಟು ತಿನ್ನಬೇಕಾಗುತ್ತದೆ ಎಂದರಿತ ಜಾರಪ್ಪನ ಹೆಂಗಸು ಸೀದಾ ಓಡಿದವಳೇ ಜೀಪಿನೊಳಗೆ ಈಗಾಗಲೇ ವಿರಾಜಮಾನನಾಗಿದ್ದ ಗಂಡನ ಪಕ್ಕ ಪ್ರತಿಷ್ಠಾಪನೆಗೊಂಡಳು.
ಇದನ್ನು ಓದಿ: ನಾನು…..! ಮೋಹಿನಿ ಗಂಡಾ, ಮೋಹನಾ!!! – ೧
ಊರಿಗೆ ಹೊಸಬನಾಗಿದ್ದ ಬಸ್ರಾಜ ಮಾತ್ರ ಆತ್ಮರಕ್ಷಣೆಗೆಂಬಂತೆ ಕ್ಷಮೆಗಾಗಿ ಬೆಲ್ಲದ್ನಾಯಕನ ಕಾಲುಗಳನ್ನೇ ತಬ್ಬಿಕೊಂಡ. ತನ್ನನ್ನು ಬೀಳಿಸಿ ಹೊಡೆಯಲು ಈ ರೀತಿ ಕಾಲು ಹಿಡಿದಿದ್ದಾನೆಂದು ತಿಳಿದ ಎಸ್.ಐ. ಪಣಂಗನೆ ಹಾರಿ, ಬಸ್ರಾಜನ ಹಲ್ಲುಗಳು ಉದುರುವಂತೆ ಮುಸುಡಿಗೇ ಬೂಟುಗಾಲಿನಿಂದ ಒದ್ದ.
ಇತ್ತ ಸಂಜೀವ, ಮೊಗಣ್ಣ ಸೇರಿ ನಾಲ್ಕಾರು ಜನರ ತಲೆಗಳನ್ನು ತಮ್ಮ ಕೈಲಿದ್ದ ಬಡಿಗೆಯಿಂದಲೇ ಬಿಚ್ಚಿಹಾಕಿದ್ದರು. ನಾಲ್ಕು ಜೀಪಿನ ಖಾಕಿದಾರಿಗಳ ಮುಂದೆ ಅವರ ಆಟ ಸಾಗದೇ ಬೀಜ ನೀರಾಗುವಂತೆ ಒದೆತಿಂದರು. ಸುಲಭಕ್ಕೆ ಗುರುತು ಸಿಗಲಾರದಂತೆ ಮುಖ-ಮೈ ಊದಿಸಿಕೊಂಡು ಸುಮಾರು ಆರು ತಿಂಗಳು ಜೈಲಿನಲ್ಲಿದ್ದು ಜಾರಪ್ಪ ದಂಪತಿಗಳಿಗೆ ಕಂಪನಿ ನೀಡಿದರು. ನಿಜ ಸಂಗತಿ ಹೇಳಿ ವಾರದ ನಂತರ ಮನೆಗೆ ಬಂದ ಬಸ್ರಾಜ ಮಾತ್ರ ಪೊಲೀಸ್ ದಾಖಲೆಯಲ್ಲಿ ನೋಟೆಡ್ ಪರ್ಸನ್ ಆಗಿಹೋದ.
ಇದನ್ನು ಓದಿ: ಗ್ರಾಮಾಯಣ~೧- ನಾನು…..! ಮೋಹಿನಿ ಗಂಡಾ, ಮೋಹನಾ!!! – ೨
ಒಂದು ವಾರ ಪೊಲೀಸ್ ಆತಿಥ್ಯದಲ್ಲಿದ್ದ ಬಸ್ರಾಜ ವಾಪಾಸ್ ಲೈನಿಗೆ ಬರುವುದರಲ್ಲಿ ಈ ಹಲಾಲುಕೋರ ಗೋಪಾಲ ಪಾರಿಯ ಜೊತೆ ಲೈನ್ಕ್ಲಿಯರ್ ಮಾಡಿಕೊಂಡಿದ್ದ. ಅಪ್ಪನ ಆಟವನ್ನು ನೋಡಿ ತನ್ನದೇ ಲೆಕ್ಕಾಚಾರ ಹಾಕಿದ ಮಗ ರಾಘವೇಂದ್ರ ಪಾರಿಯ ಎರಡನೇ ಮಗಳನ್ನು ಹಿಂಬಾಲಿಸತೊಡಗಿದ.
ಪಾರಿಯ ಹಿರಿಯ ಮಗಳಿಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ನಿಶ್ಚಯವಾಗಿದ್ದ ವರ ಸಿದ್ದೇಶ ದಾವಣಗೆರೆಯಿಂದ ಬಸ್ರಾಜನ ಕುಟುಂಬ ಬಂದಿದ್ದ ಅದೇ ಲಾರಿಯಲ್ಲಿ ಮೂಡಿಗೆರೆಗೆ ಬಂದು, ಬೀಜುವಳ್ಳಿಯ ಜೂಜಿ ಪರ್ಬುಗಳ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ. ಯಾರೋ ಅವನಿಗೆ ಈ ಸುದ್ದಿ ಮುಟ್ಟಿಸಿ ಹಿರಿಯ ಮಗಳಿಗೇ ರಾಘವೇಂದ್ರ ಗಾಳ ಹಾಕುತ್ತಿದ್ದಾನೆಂದು ತಿಳಿಸಿದರು.
ಇದನ್ನು ನಿಜವೆಂದೇ ತಿಳಿದ ಸಿದ್ದೇಶ ನಾಳೆ-ನಾಡಿದ್ದರಲ್ಲಿ ತೋಟದ ಕೆಲಸದ ಲೆಕ್ಕಾಚಾರ ಮುಗಿಸಿ ಊರಿಗೆ ವಾಪಾಸ್ ಹೊರಡುವುದರಲ್ಲಿದ್ದವನು, ತನ್ನದೇ ಗುಂಪಿನ ಗೆಳೆಯರನ್ನು ಸೇರಿಸಿಕೊಂಡು ರಾಘವೇಂದ್ರನಿಗೆ ಸರಿಯಾಗಿ ಚುರುಕು ಮುಟ್ಟಿಸಲು ಕಾಯುತ್ತಿದ್ದ.
ಶುಕ್ರವಾರದ ಸಂತೆ ಮುಗಿಸಿ ಗೋಪಾಲ ಹಾಗೂ ಅವನ ಮಗ ರಾಘವೇಂದ್ರ ಎಕ್ಸ್ಡಿ ಬೈಕನ್ನೇರಿ ಮನೆಗೆ ವಾಪಾಸ್ ಬರುವಾಗ ಕೆಡವಿಹಾಕಿದರು. ರಸ್ತೆಗೆ ಅಡ್ಡಲಾಗಿ ಟೆಲಿಫೋನ್ ತಂತಿಯನ್ನು ಬಿಗಿದು ಬೀಳಿಸಿ, ಗೋಪಾಲನಿಗೆ ಅವನ ಅಪ್ಪನ ಹೆಸರು ಹಾಗೂ ರಾಘವೇಂದ್ರನಿಗೆ ಗೋಪಾಲನ ಹೆಸರು ಮರೆತೇಹೋಗುವಂತೆ ಹೊಡ್ತಾ ಅಂದ್ರೆ ಹೊಡ್ತಾ ಹೊಡೆದು ಕೊಟ್ಕೆಡವಿದರು.
ಇದನ್ನು ಓದಿ: ನಾನು…..! ಮೋಹಿನಿ ಗಂಡಾ, ಮೋಹನಾ!!! – ೩
ನೀರು ಕೇಳುತ್ತಿದ್ದವರನ್ನು ಕಾಲ್ಕಟ್ಟಿದ ಹಂದಿಯನ್ನು ಎಸೆಯುವಂತೆ ಈಚಲ ಗುತ್ತಿಯ ಮೇಲೆ ಬಿಸಾಡಿ, ರಾತ್ರೋರಾತ್ರಿ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ ಹತ್ತಿ ಊರುಬಿಟ್ಟರು.
ಕುಂಟುತ್ತಾ ಮುಲುಗುತ್ತಾ ಮನೆ ಸೇರಿದ ಗೋಪಾಲನಿಗೆ ಬಸ್ರಾಜನ ಮೇಲೇ ಅನುಮಾನ ಶುರುವಾಗಬೇಕೇ? ನಾಲ್ಕು ದಿನ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದ ಗೋಪಾಲ ಮತ್ತವನ ಮಗ ತಮ್ಮನ್ನು ನೋಡಲು ಆಸ್ಪತ್ರೆಗೆ ಬಂದವರೆಲ್ಲರೆದುರಿಗೆ ಹಲ್ಲು ಬಿಗಿದು ಮುಷ್ಠಿ ಹಿಡಿದು, “ಆ ನನ್ಮಕ್ಕಳು ಹಗಲಲ್ಲಿ ಸಿಗಬೇಕಿತ್ತು, ಬೋಟಿ ನಿಖಾಲಿ ಮಾಡುತ್ತಿದ್ದೆ. ಹಲಾಲ್ಕೋರರು ರಸ್ತೆಗೆ ಅಡ್ಡ ತಂತಿ ಕಟ್ಟಿ ಬೀಳಿಸಿ, ಕಣ್ಣಿಗೆ ಖಾರ ಪುಡಿ ಬೇರೆ ಹಾಕಿದ್ರಲ್ಲಾ, ಅದಿಕ್ಕೇ ತಿರುಗಿ ಬಾರಿಸಲಿಕ್ಕೇ ಸಾಧ್ಯ ಆಗ್ಲಿಲ್ಲ” ಎಂದು ಸುಸ್ತಾಗುವವರೆಗೆ ಅಪ್ಪ, ಸುಸ್ತಾದ ನಂತರ ಮಗ ಅದೇ ಟೇಪನ್ನು ತಿರುತಿರುಗಿಸಿ ಹಾಕುತ್ತಿದ್ದರು.
ಇದರ ನಡುವೆ ತಮ್ಮಗಳ ಎಕ್ಸ್ಟ್ರಾ ಕರಿಕ್ಯುಲರ್ ಆ್ಯಕ್ಟಿವಿಟಿ ಬಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪ ಮಾಡುತ್ತಿರಲಿಲ್ಲ.
ಡಿಸ್ಚಾರ್ಜ್ ಆಗಿ ಮನೆಗೆ ಬಂದವರಿಗಿನ್ನೂ ಬಾತುಕೊಂಡು ಊದಿದ್ದ ಮೂತಿ, ಹರಿದಿದ್ದ ಕಿವಿ ಸುಸ್ಥಿತಿಗೆ ಬಂದಿರಲಿಲ್ಲ. ಬಂದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ಕಣದಲ್ಲಿ ಹರಡಿದ್ದ ಕಾಫಿಬೀಜವನ್ನು ಬಸ್ರಾಜನ ಕೈಯಲ್ಲಿ ಗುಡ್ಡೆ ಮಾಡಿಸಿ, ಇನ್ನಿಬ್ಬರು ಕೆಲಸಗಾರರ ಸಹಾಯದಿಂದ ಚೀಲಗಳಿಗೆ ತುಂಬಿಸಿ ಇಡಿಸಿದ್ದು.
ಇದನ್ನು ಓದಿ: ನಾನು…..! ಮೋಹಿನಿ ಗಂಡ, ಮೋಹನಾ!!! – ೪
ಆ ವರ್ಷ ಸಾಕಷ್ಟು ಬೆಳೆಯೂ ಬಂದಿದ್ದರಿಂದ ಅರ್ಧ ಕಣದ ಕಾಫಿ ತುಂಬುವುದರೊಳಗೆ ಸಾಕುಸಾಕಾಗಿ ಸಾಯಂಕಾಲವಾಯ್ತು. ಯಾರಿಗೂ ಬೇಡದಿದ್ದ ಕಾಲದಲ್ಲಿ ಊರಿನ ಖಾಲಿ ಜಾಗಕ್ಕೆಲ್ಲಾ ತನ್ನಪ್ಪನ ಮನೆಯ ಆಸ್ತಿಯೆಂದೆಣಿಸಿ ಬೇಲಿ ಹಾಕಿಸಿ, ಕಾಡನ್ನೆಲ್ಲಾ ತೋಟ ಮಾಡಿಕೊಂಡು ದಬಾಯಿಸಿಕೊಂಡಿದ್ದ ಗೋಪಾಲ ಇತ್ತೀಚೆಗೆ ಊರಿನಲ್ಲಿದ್ದ ಭೂರಹಿತರಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿಯನ್ನು ಆರು ಕಾಸು, ಮೂರು ಕಾಸು ನೀಡಿ ಬೇನಾಮಿ ಪತ್ರ ಮಾಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ.
ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಅಲ್ಪಸ್ವಲ್ಪ ವಿದ್ಯೆ ಪಡೆದಿದ್ದ ಯುವಕರು ತಮ್ಮತಮ್ಮ ಜಮೀನನ್ನು ವಾಪಾಸ್ ಪಡೆಯಲು ತಹಶೀಲ್ದಾರರಿಗೆ ಅರ್ಜಿ ಗುಜರಾಯಿಸಿ ಪುನರ್ಸ್ವಾಧೀನಕ್ಕೆ ಕಾಯುತ್ತಿದ್ದರು.
ಅವರಪ್ಪಂದಿರು ಮುಕುಳಿ ಬಗ್ಗಿಸಿ ದುಡಿಯಲಾರದೆ, ಪುಗಸಟ್ಟೆ ಸಿಕ್ಕಿದ್ದ ಭೂಮಿಯಲ್ಲಿ ಕೃಷಿ ಮಾಡಲಾಗದೇ ಹೆಂಡ ಕುಡಿದು, ತುಂಡು ತಿಂದು, ಭಂಗಿ ಸೇದುವ ಆಸೆಯಿಂದ ಸರ್ಕಾರ ಮಂಜೂರು ಮಾಡಿದ ಜಮೀನನ್ನು ಮಾರಿ, ಸಿಕ್ಕ ದುಡ್ಡು ಮುಗಿಸಿಕೊಂಡ ನಂತರ ಕೊಂಡವರ ಬುಡಕ್ಕೇ ನೀರು ತಿರುವಲು ಮಕ್ಕಳನ್ನು ಛೂ ಬಿಟ್ಟಿದ್ದರು.
ಗೋಪಾಲನಂತೆ ಬಡವರ ಭೂಮಿಯನ್ನು ಸಿಕ್ಕಿದ್ದೇ ಛಾನ್ಸ್ ಎಂದುಕೊಂಡು ಸಾಗುವಳಿ ಶುರುಮಾಡಿದ್ದವರೀಗ ಭೂಮಿ ಹಿಂದಿರುಗಿಸುವುದನ್ನು ತಪ್ಪಿಸಿಕೊಳ್ಳಲು ವಾರಕ್ಕೊಮ್ಮೆ ನೂರು-ಇನ್ನೂರನ್ನು ಹಫ್ತಾ ಎಂಬಂತೆ ನೀಡಿ, ಮನಸ್ಸಿನಲ್ಲೇ ಅಕಟಕಟಾ ಎಂದು ಶಪಿಸುತ್ತಿದ್ದರು.
ಇದನ್ನು ಓದಿ: ಎನ್ನ ಭಂಜಿ!! – ೧
ವರ್ಷಾನುಗಟ್ಟಲೆ ಯಾವುದೇ ಕೃಷಿ ಮಾಡದೇ, ಕಡೆಗೆ ಮುಳ್ಳು ಬೇಲಿಯನ್ನೂ ಸಹ ಹಾಕದೆ, ಈಚಲ ಹರ, ಸೀಮೇಸೀಗೆ ಲಂಟಾನಾ, ಕೆಂಜಿಗೆ ದಬ್ಬಲನ್ನು ಬೆಳೆಯಲು ಹಾಗೆಯೇ ಬಿಟ್ಟು, ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೋರಿ ಮೇಲೆ ಕೂತು ಬೀಡಿ ಸೇದುತ್ತಾ, ಬಿಸಿಲು ಕಾಯಿಸುತ್ತಾ ಕಾಲಹರಣ ಮಾಡುತ್ತಿದ್ದರು.
ಚೌಡಿ, ಜಟಿಗ, ಮಾರಿ ಹಬ್ಬಗಳನ್ನು ಉಂಡುಕೊಂಡು, ನಾಳೆ ಕೆಲಸಕ್ಕೆ ಬರ್ತೀನಿ ಎಂದೋ, ಜನರನ್ನು ಕೆಲಸಕ್ಕೆ ಕಳಿಸುತ್ತೇನೆ ಎಂದೋ ಬೂರಿ ಬಿಡುತ್ತಾ, ತೋಟದ ಮಾಲೀಕರಿಂದ ನೂರು-ಇನ್ನೂರು ತೆಗೆದುಕೊಂಡು ಕಾಲಕಳೆಯುತ್ತಿದ್ದರು.
ಮನೆಯ ದುಡಿಯುವ ಹೆಂಗಸರನ್ನು ಹೆದರಿಸಿ ಸಂತೆಯ ಹಿಂದಿನ ದಿನದ ವಾರದ ಸಂತೆಯ ಹಣ ಕಿತ್ತುಕೊಂಡು, ಬಾಯಮ್ಮನಂಗಡಿಯ ಹಂದಿ ತುಂಡನ್ನೂ, ಜಾರಪ್ಪನ ಡಿಸ್ಟಿಲರಿಯ ಬಟ್ಟಿ ಸಾರಾಯಿಯನ್ನೂ ಹೊಟ್ಟೆಗಿಳಿಸಿ, “ಅಲ್ಕನ ಮಾರಾಯ, ನಮ್ ಎಲ್ಲೆಮ್ಮೆ ಇದಾನಲ್ಲ” ಎಂದು ಲಾಯ್ಲೋಟ್ ಶುರುಮಾಡುತ್ತಿದ್ದರು.
ಇಂತಿಪ್ಪ ಕಾಲದಲ್ಲಿ ಗೋಪಾಲನಿಂದ ಗುಮಾನಿಗೊಳಗಾಗಿದ್ದ ಬಸ್ರಾಜ ಕಾಫಿಬೀಜ ತುಂಬಿಸಿ ಸುಸ್ತಾಗಿ ಮನೆಗೆ ಹೋಗಿ, ಮುದ್ದೆ-ಚೊಗಟೇ ಸೊಪ್ಪಿನ ಸಾರನ್ನು ಉಂಡು, ಆಲ್ ಇಂಡಿಯಾ ರೇಡಿಯೋವನ್ನು ಕೇಳುತ್ತಾ ವಿವಿಧ ಭಾರತಿಯಲ್ಲಿ “ತೇರೆ ಮೇರೆ ಬೀಚುಮೇ…” ಎಂಬ ಹಾಡನ್ನು ಹಾಕಿಕೊಂಡು, ಲೈನ್ ಮನೆಯ ಮಾಡನ್ನು ಗಮನಿಸುತ್ತಾ ವಿಶ್ರಮಿಸುತ್ತಿದ್ದ.
ದನದ ಕೊಟ್ಟಿಗೆಯ ಗಂಜಳ, ಕಾಫಿ ಪಲ್ಪರ್ ಸಿಪ್ಪೆಯ ಕೊಳೆತ ರಸ ಹಾಗೂ ದಿನವಿಡೀ ದುಡಿದ ಮೈಯ ಬೆವರಿನಿಂದ ತೊಯ್ದಿದ್ದ ಬಟ್ಟೆಗಳ ಕಮಟು ವಾಸನೆಯ ವಿಚಿತ್ರವಾದ ಬ್ಲೆಂಡ್ನ್ನು ಲೈನಿನ ಹೊರಗೆ ಬೇಲಿ ಎಡೆಯಲ್ಲಿ ಆಗಸದೆತ್ತರಕ್ಕೆ ನಿಂತಿದ್ದ ನೀಲಗಿರಿ ಮರದ ಸುವಾಸನೆಯೊಂದಿಗೆ ಮಿಳಿಸುತ್ತಾ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಿದ್ದವನಿಗೆ ಕೆಲಸದ ಸುಸ್ತಿನಿಂದ ತಡೆಯಲಾರದಷ್ಟು ನಿದ್ರೆ ಆವರಿಸಿತ್ತು.
ಇದ್ದಕ್ಕಿದ್ದಂತೆ ಎಚ್ಚರವಾದವನಿಗೆ ತನ್ನ ಲೈನಿನ ಬಾಗಿಲಿನಲ್ಲಿ ಕರಿಬೂಟಿನ ಖಾಕಿದಾರಿಗಳು, “ಹೊರಗೆ ಬಾರೋ ಸುವ್ವರ್” ಎಂದು ಅಬ್ಬರಿಸುತ್ತಿದ್ದುದು ಕೇಳಿಸಿತು.
“ಬೋಳಿಮಗನೇ, ಕೆಲಸ ಕೊಟ್ಟ ಸಾವ್ಕಾರನ ಮನೆಯ ಕಾಫಿನೇ ಕದೀತೀಯಾ?” ಎಂದು ಕುತ್ತಿಗೆ ಹಿಡಿದು ಜೀಪಿನೊಳಗೆ ದಬ್ಬಿಸಿಕೊಂಡ.
ಗೋಪಾಲ ತನ್ನ ಮಗನ ಸಹಾಯದಿಂದ ಕಾಫಿ ಮೂಟೆಯೊಂದನ್ನು ತಂದು ಬಸ್ರಾಜ ವಾಸವಾಗಿದ್ದ ಲೈನಿನ ಹಿಂಬದಿಯಲ್ಲಿಟ್ಟು ಪೊಲೀಸರಿಗೆ ಫೋನಾಯಿಸಿದ. ಬಸ್ರಾಜನನ್ನು ವಿನಾ ಕಾರಣ ಕಳ್ಳನನ್ನಾಗಿಸಿ ನಾಲ್ಕು ದಿನ ಲಾಕಪ್ನಲ್ಲಿರಿಸಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿಸಿದಂತೆ, ಹೊಟ್ಟೆಪಾಡಿಗಾಗಿ ಊರಿಂದೂರಿಗೆ ಬಂದಿದ್ದ ಅಮಾಯಕನನ್ನು ಮಟ್ಟಹಾಕಲು ಏನು ಅಗತ್ಯವೋ ಅದನ್ನೇ ಮಾಡಿದ್ದ.
ಪಾರಿ ತನ್ನ ಹೆಣ್ಮಕ್ಕಳೊಂದಿಗೆ ಅಸಹಾಯಕಳಾಗಿ ನಿಂತಿದ್ದರೆ, ಬಸ್ರಾಜನ ಮಗ ಸಹಾಯಕ್ಕಾಗಿ ಮೇಸ್ತ್ರಿಯನ್ನು ಕರೆತರಲು ಹುಲ್ಗುಡ್ಡೆಯ ಕಡೆ ಏದುಸಿರು ಬಿಡುತ್ತಾ ಓಡತೊಡಗಿದ.
ಮುಂದುವರೆಯುವುದು…..

