ಕೊರಟಗೆರೆ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸದರ ಸಮುದಾಯ ಭವನದಲ್ಲಿ ಶನಿವಾರ ವೈಭವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಕಾಮರಾಜು, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಂಗರಸಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎನ್.ಕೆ. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಕೆ.ಎಂ., “ಕೆಂಪೇಗೌಡರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ಜಾತಿ-ಧರ್ಮದ ಜನರನ್ನು ಒಗ್ಗೂಡಿಸಿ ಕೆರೆ, ಕಟ್ಟೆ, ದೇವಾಲಯ ಹಾಗೂ ಮಾರುಕಟ್ಟೆಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ ದೂರದೃಷ್ಟಿಯ ಆಡಳಿತಗಾರರು. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಎನ್ಜೆ ಗ್ರೂಪ್ನ ಸಂಸ್ಥಾಪಕ ಎಂ.ಎನ್.ಜೆ. ಮಂಜುನಾಥ್ ಮಾತನಾಡಿ, ಕೆಂಪೇಗೌಡರ ವ್ಯಾಪಾರ ಹಾಗೂ ಅಭಿವೃದ್ಧಿ ದೃಷ್ಟಿಕೋನವೇ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೊರಟಗೆರೆಯಲ್ಲಿ ನಿರ್ಮಾಣವಾಗಲಿರುವ ಒಕ್ಕಲಿಗ ಸಮುದಾಯ ಭವನಕ್ಕೆ ತಮ್ಮ ವತಿಯಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಉದ್ಯಮಿ ಪಿ.ಎನ್.ಕೆ. ಕೃಷ್ಣಮೂರ್ತಿ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ವತಿಯಿಂದ 51 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು. “ನಮ್ಮ ಸಮುದಾಯದ ಜೊತೆಗೆ ಇತರ ಸಮುದಾಯಗಳ ಅಭಿವೃದ್ಧಿಗೂ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ. ಕೆಂಪೇಗೌಡರು ಪರಿಸರ ಸಂರಕ್ಷಣೆ, ರೈತಪರ ಕಾಳಜಿ, ನೀರಿನ ಸಂರಕ್ಷಣೆ, ಕಲೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಸಮಾನ ಆದ್ಯತೆ ನೀಡಿದ್ದರು. ಅವರು ನಿರ್ಮಿಸಿದ ಕೆರೆಗಳ ಸರಣಿ ಇಂದಿಗೂ ಪರಿಸರ ಸಂರಕ್ಷಣೆಗೆ ಮಾದರಿಯಾಗಿದೆ. ಕ್ಷೇತ್ರದ ಯುವಕರು, ವಿದ್ಯಾರ್ಥಿಗಳು, ಶಾಲೆಗಳು, ದೇವಾಲಯಗಳು ಹಾಗೂ ತಾಲ್ಲೂಕಿನ ಅಭಿವೃದ್ಧಿಗಾಗಿ ಸದಾ ಜನರೊಂದಿಗೆ ಇರುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಎಂ.ಎನ್.ಜೆ. ಮಂಜುನಾಥ್ ಹಾಗೂ ಪಿ.ಎನ್.ಕೆ. ಕೃಷ್ಣಮೂರ್ತಿ ಅವರ ಉದಾರ ದೇಣಿಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಸಮುದಾಯ ಭವನ ನಿರ್ಮಾಣಕ್ಕೆ ಇನ್ನಷ್ಟು ದಾನಿಗಳು ಮುಂದೆ ಬಂದು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಜಯಂತಿ ವೇದಿಕೆಯಲ್ಲೇ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟು 1 ಕೋಟಿ 1 ಲಕ್ಷ ರೂಪಾಯಿ ನೆರವಿನ ಘೋಷಣೆ ನಡೆದಿದ್ದು, ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಈ ಘೋಷಣೆಗೆ ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
– ವರದಿ: ನರಸಿಂಹಯ್ಯ ಹೊಸಕೋಟೆ
