ಬೆಂಗಳೂರು, ಸೆಪ್ಟೆಂಬರ್ 8: ಪ್ರೋಕಾಮ್ ಇಂಟರ್ನ್ಯಾಷನಲ್ ಆಯೋಜಿಸುವ ‘ಟಾಟಾ ಮುಂಬೈ ಮ್ಯಾರಥಾನ್’ (TMM) 21 ವರ್ಷಗಳ ಪಯಣದಲ್ಲಿ ಕೇವಲ ಓಟದ ಸ್ಪರ್ಧೆಯಾಗಿರದೆ, ಸಾಮಾಜಿಕ ಬದಲಾವಣೆಗೆ ವೇದಿಕೆಯಾಗಿರುವ ಚಳವಳಿಯಾಗಿ ಬೆಳೆದಿದೆ. 2026ರ ಆವೃತ್ತಿಯು ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ₹663.23 ಕೋಟಿ ಮೌಲ್ಯದ ಪ್ರಭಾವ ಬೀರಿದೆ ಎಂದು ವರದಿ ತಿಳಿಸಿದೆ.
ವರ್ಲ್ಡ್ ಅಥ್ಲೆಟಿಕ್ಸ್ನ ‘ಗೋಲ್ಡ್ ಲೇಬಲ್ ರೇಸ್’ ಆಗಿರುವ TMM, ಏಷ್ಯಾದ ಪ್ರಮುಖ ಮ್ಯಾರಥಾನ್ಗಳಲ್ಲಿ ಒಂದಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು, ನಾಗರಿಕ ಹೆಮ್ಮೆಯನ್ನು ಬೆಳೆಸುವುದು ಹಾಗೂ ಕ್ರೀಡೆಯ ಮೂಲಕ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಮ್ಯಾರಥಾನ್ ಪ್ರಮುಖ ಪಾತ್ರ ವಹಿಸುತ್ತಿದೆ.
ಮುಂಬೈನ ಸಹ್ಯಾದ್ರಿ ಅತಿಥಿಗೃಹದಲ್ಲಿ ಸೆಪ್ಟೆಂಬರ್ 8ರಂದು ಪ್ರೋಕಾಮ್ ಇಂಟರ್ನ್ಯಾಷನಲ್ ಮತ್ತು IISM ಜಂಟಿಯಾಗಿ ಸಿದ್ಧಪಡಿಸಿದ ವರದಿಯನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವೆ ಸುನೇತ್ರಾ ಅಜಿತ್ ಪವಾರ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದಲ್ಲಿ ಕ್ರೀಡೆಯು ಕೇವಲ ಸ್ಪರ್ಧೆಯ ವಿಷಯವಾಗಿ ಉಳಿಯದೆ, ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಎಂಬುದು ನನ್ನ ಕನಸು. ನಮ್ಮ ಸಂದೇಶ ಸ್ಪಷ್ಟವಾಗಿದೆ—‘ಫಿಟ್ ಮಹಾರಾಷ್ಟ್ರ, ಸಮರ್ಥ ಮಹಾರಾಷ್ಟ್ರ’,” ಎಂದರು.
ಮುಂದಿನ ಐದು ವರ್ಷಗಳ ಕಾಲ ಮಹಾರಾಷ್ಟ್ರ ಸರ್ಕಾರದಿಂದ ಪ್ರಾಯೋಜಿಸಲ್ಪಡುವ ಏಕೈಕ ಕ್ರೀಡಾಕೂಟ TMM ಆಗಿದೆ ಎಂದು ಅವರು ತಿಳಿಸಿದರು.
ಛಗನ್ ಭುಜಬಲ್ ಮಾತನಾಡಿ, ಟಾಟಾ ಮುಂಬೈ ಮ್ಯಾರಥಾನ್ ಕ್ರೀಡಾಕೂಟದ ವ್ಯಾಪ್ತಿಯನ್ನು ಮೀರಿ ಮುಂಬೈನ ಗುರುತಿನ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ನಗರವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದರ ಜೊತೆಗೆ ಮುಂಬೈಯನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವ ಪ್ರಮುಖ ವೇದಿಕೆಯಾಗಿದೆ ಎಂದರು.
ಪ್ರೋಕಾಮ್ ಇಂಟರ್ನ್ಯಾಷನಲ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಮಾತನಾಡಿ, ಪ್ರತಿಯೊಂದು ಹೆಜ್ಜೆಯೂ ದೊಡ್ಡ ಪ್ರಭಾವ ಸೃಷ್ಟಿಸಬಹುದು ಎಂಬ ನಂಬಿಕೆಯ ಮೇಲೆ TMM ನಿರ್ಮಾಣಗೊಂಡಿದೆ. 2020ರಲ್ಲಿ ₹202.78 ಕೋಟಿಯಷ್ಟಿದ್ದ ಮ್ಯಾರಥಾನ್ನ ಒಟ್ಟು ಪ್ರಭಾವವು 2026ರಲ್ಲಿ ₹663.22 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.
TCS ಇಂಡಿಯಾ ಬಿಸಿನೆಸ್ನ ಅಧ್ಯಕ್ಷ ಉಜ್ಜಲ್ ಮಾಥುರ್ ಮಾತನಾಡಿ, ಜನರು ಹಂಚಿಕೊಂಡ ಆಶಯದೊಂದಿಗೆ ಒಂದಾಗುವುದು ಮತ್ತು ಮಹತ್ವ ಹೊಂದಿರುವ ಸಾಮಾಜಿಕ ವಿಷಯಗಳಿಗೆ ಬೆಂಬಲ ನೀಡುವುದು TMMನ ಪ್ರಮುಖ ಉದ್ದೇಶವಾಗಿದೆ ಎಂದರು.
₹602.54 ಕೋಟಿ ಆರ್ಥಿಕ ಚಟುವಟಿಕೆ
2026ರ ಮ್ಯಾರಥಾನ್ನಿಂದ ₹602.54 ಕೋಟಿ ಆರ್ಥಿಕ ಚಟುವಟಿಕೆ ಸೃಷ್ಟಿಯಾಗಿದೆ. ಇದರಲ್ಲಿ ಆರೋಗ್ಯ ಮತ್ತು ತರಬೇತಿಗೆ ₹277.58 ಕೋಟಿ, ವಸತಿ ಮತ್ತು ಪ್ರಯಾಣಕ್ಕೆ ₹120.76 ಕೋಟಿ, ಉಡುಪುಗಳಿಗೆ ₹112.88 ಕೋಟಿ ಹಾಗೂ ರೇಸ್ ಗೇರ್ಗಳಿಗೆ ₹87.79 ಕೋಟಿ ಖರ್ಚಾಗಿದೆ.
ಇದರ ಪರಿಣಾಮವಾಗಿ ಶೇ.64ರಷ್ಟು ವ್ಯಾಪಾರ ಸಂಸ್ಥೆಗಳು ಆದಾಯ ಹೆಚ್ಚಳ ಕಂಡಿದ್ದು, ಶೇ.67ರಷ್ಟು ಸಂಸ್ಥೆಗಳು ಗ್ರಾಹಕರ ಭೇಟಿಯಲ್ಲಿ ಏರಿಕೆ ದಾಖಲಿಸಿವೆ.
46 ದೇಶಗಳಿಂದ 70 ಸಾವಿರಕ್ಕೂ ಅಧಿಕ ಸ್ಪರ್ಧಿಗಳು
2026ರ ಆವೃತ್ತಿಯಲ್ಲಿ 46 ದೇಶಗಳು ಮತ್ತು 37 ಭಾರತೀಯ ರಾಜ್ಯಗಳಿಂದ ಒಟ್ಟು 70,065 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ 18,862 ಮಂದಿ ಮಹಿಳೆಯರಾಗಿದ್ದು, ಶೇ.27ರಷ್ಟು ಪಾಲು ಹೊಂದಿದ್ದಾರೆ. 17,803 ಮಂದಿ ಹೊರಜಿಲ್ಲೆಗಳಿಂದ ಆಗಮಿಸಿದ್ದರು.
ಭಾಗವಹಿಸಿದವರಲ್ಲಿ ಶೇ.60ರಷ್ಟು ಮಂದಿ 25ರಿಂದ 44 ವರ್ಷ ವಯೋಮಾನದವರಾಗಿದ್ದಾರೆ.
ಆರೋಗ್ಯದ ದೃಷ್ಟಿಯಿಂದಲೂ ಮ್ಯಾರಥಾನ್ ಪ್ರಭಾವ ಬೀರಿದೆ. ಶೇ.67ರಷ್ಟು ಮಂದಿ ಆರೋಗ್ಯಕ್ಕಾಗಿ ಓಟ ಆರಂಭಿಸಿದ್ದು, ಶೇ.81ರಷ್ಟು ಮಂದಿ ಪೌಷ್ಟಿಕ ಆಹಾರಕ್ಕೆ, ಶೇ.98ರಷ್ಟು ಮಂದಿ ದೈಹಿಕ ಸಾಮರ್ಥ್ಯದ ತರಬೇತಿಗೆ ಮತ್ತು ಶೇ.94ರಷ್ಟು ಮಂದಿ ಮಾನಸಿಕ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿ ಶೇ.49ರಷ್ಟು ಸ್ಪರ್ಧಿಗಳು ತೂಕ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
21 ವರ್ಷಗಳಲ್ಲಿ ₹500 ಕೋಟಿಗೂ ಹೆಚ್ಚು ದೇಣಿಗೆ
2026ರ ಆವೃತ್ತಿಯಲ್ಲಿ ₹60.68 ಕೋಟಿ ದೇಣಿಗೆ ಸಂಗ್ರಹವಾಗಿದ್ದು, TMM ಆರಂಭವಾದ 21 ವರ್ಷಗಳಲ್ಲಿ ಸಂಗ್ರಹಿಸಲಾದ ಒಟ್ಟು ನಿಧಿಯು ₹500 ಕೋಟಿ ಗಡಿ ದಾಟಿದೆ.
ಒಟ್ಟು 11,632 ನಿಧಿ ಸಂಗ್ರಹಕಾರರು, 194 ಕಾರ್ಪೊರೇಟ್ ಸಂಸ್ಥೆಗಳು ಹಾಗೂ 300ಕ್ಕೂ ಹೆಚ್ಚು ಎನ್ಜಿಒಗಳು ಈ ನಿಧಿ ಸಂಗ್ರಹ ಅಭಿಯಾನದ ಪ್ರಯೋಜನ ಪಡೆದಿವೆ. 11 ‘ಚೇಂಜ್ ಲೆಜೆಂಡ್ಸ್’ ತಲಾ ₹1 ಕೋಟಿಗೂ ಹೆಚ್ಚು ನಿಧಿ ಸಂಗ್ರಹಿಸಿದ್ದಾರೆ.
ಪರಿಸರ ಸಂರಕ್ಷಣೆಯತ್ತವೂ ಹೆಜ್ಜೆ
TMMನ ‘ಗ್ರೀನ್ ಬಿಬ್’ ಉಪಕ್ರಮದ ಮೂಲಕ ₹1.18 ಕೋಟಿ ಸಂಗ್ರಹಿಸಲಾಗಿದ್ದು, ಸೋಲಾಪುರದಲ್ಲಿ 18,000ಕ್ಕೂ ಹೆಚ್ಚು ಮರಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಮ್ಯಾರಥಾನ್ನಿಂದ ಉತ್ಪತ್ತಿಯಾದ 21.8 ಟನ್ಗಳಷ್ಟು ತ್ಯಾಜ್ಯವನ್ನು ಶೇ.100ರಷ್ಟು ಮರುಬಳಕೆ ಅಥವಾ ಮರುಸಂಸ್ಕರಣೆ ಮಾಡಲಾಗಿದ್ದು, ಇದರಿಂದ 49,147 ಕೆಜಿ CO₂e ಹೊರಸೂಸುವಿಕೆಯನ್ನು ತಡೆಯಲಾಗಿದೆ. ಸ್ತ್ರೀ ಮುಕ್ತಿ ಸಂಘಟನಾ ಮತ್ತು ಮುಂಬೈ ರೋಟಿ ಬ್ಯಾಂಕ್ ಸಹಯೋಗದಲ್ಲಿ ತ್ಯಾಜ್ಯ ಹಾಗೂ ಆಹಾರದ ಮರುಬಳಕೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಸಾಮಾಜಿಕ ಸೇವೆ, ಆರೋಗ್ಯ, ಆರ್ಥಿಕ ಚಟುವಟಿಕೆ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಮೂಲಕ ಟಾಟಾ ಮುಂಬೈ ಮ್ಯಾರಥಾನ್ ತನ್ನ 21 ವರ್ಷಗಳ ಪಯಣದಲ್ಲಿ ಕ್ರೀಡಾಕೂಟವನ್ನು ಮೀರಿದ ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿದೆ.
