ಚನ್ನರಾಯಪಟ್ಟಣ: ಶ್ರವಣಬೆಳಗೊಳದ ಶ್ರೀಮತಿ ಎಸ್.ಎನ್. ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 2026–27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ನವೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನವೋದಯ ಕಾಲೇಜು ಆಡಳಿತ ಮಂಡಳಿ ವತಿಯಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎನ್. ದೀಪು ಮಾತನಾಡಿ, ನವೋದಯ ವಿದ್ಯಾಸಂಸ್ಥೆಯು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು, ಉತ್ತಮ ಇತಿಹಾಸ ಹೊಂದಿದೆ. ಇಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಸ್ಥೆಯ ಇತಿಹಾಸವನ್ನು ಮುಂದುವರಿಸುವ ರೀತಿಯಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನವೋದಯ ವಿದ್ಯಾಸಂಸ್ಥೆಯಿಂದ ಲಕ್ಷಾಂತರ ಮಂದಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇದೀಗ ನಿಮ್ಮ ಸರದಿ ಬಂದಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಕ್ರೀಡೆಯೊಂದಿಗೆ ಪಠ್ಯದಲ್ಲಿಯೂ ಹೆಚ್ಚಿನ ಗಮನ ಹರಿಸಬೇಕು. ಕಲಿಕೆಯ ಸಂದರ್ಭದಲ್ಲಿ ಶಿಸ್ತು ಅತ್ಯಂತ ಮುಖ್ಯ. ಇಂದಿನಿಂದಲೇ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರು ನವೋದಯ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿದ್ದು, ತಾವು ನವೋದಯ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂತಹ ಸಾಧನೆ ನಿಮ್ಮದಾಗಲಿ ಎಂದು ಅವರು ಆಶಿಸಿದರು.
ಆಡಳಿತ ಮಂಡಳಿ ನಿರ್ದೇಶಕ ಆನಂದ್ ಕಾಳೇನಹಳ್ಳಿ ಮಾತನಾಡಿ, ಓದಿನಲ್ಲಾಗಲಿ, ಕ್ರೀಡೆಯಲ್ಲಾಗಲಿ ಶಿಸ್ತು ಬಹಳ ಮುಖ್ಯ. ಶಿಸ್ತಿನಿಂದ ಮುನ್ನಡೆದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ನಮ್ಮ ಸಂಸ್ಥೆ ಕಳೆದ 25 ವರ್ಷಗಳಿಂದ ಕ್ರೀಡಾಕೂಟಗಳಲ್ಲಿ ನಿರಂತರವಾಗಿ ಸಮಗ್ರ ಪ್ರಶಸ್ತಿ ಪಡೆಯುತ್ತಿರುವುದೇ ಸಾಕ್ಷಿ ಎಂದರು.
ಸಂಸ್ಥೆಯ ಆಧಾರಸ್ತಂಭವಾಗಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮಾಡಿರುವ ಸಾಧನೆಯನ್ನು ಪರೀಕ್ಷಾ ಫಲಿತಾಂಶದಲ್ಲಿಯೂ ತೋರಿಸಬೇಕು. ನೂರು ವರ್ಷಗಳ ಶಾಲೆಯ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೂ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಉತ್ತಮ ಬೋಧಕರ ಸಹಕಾರ ಪಡೆದು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ನವೋದಯ ವಿದ್ಯಾಸಂಘದ ಅಧ್ಯಕ್ಷ ಸಿ.ಜೆ. ಮಂಜುನಾಥ್ ಮಾತನಾಡಿ, ಕ್ರೀಡೆಯಲ್ಲಿ ಕಾಲೇಜಿಗೆ ಸಮಗ್ರ ಪ್ರಶಸ್ತಿಯ ಕೀರ್ತಿ ತಂದಿರುವ ವಿದ್ಯಾರ್ಥಿಗಳು ಶಿಕ್ಷಣದಲ್ಲಿಯೂ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸಂಸ್ಥೆಗೆ ಹೆಮ್ಮೆ ತರಬೇಕು ಎಂದರು.
ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನವೋದಯ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಹಾಗೂ ವಿವಿಧ ಗುಂಪು ಆಟಗಳಲ್ಲಿ ಭಾಗವಹಿಸಿ ಹಲವು ವಿಭಾಗಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಾಲಕರ ವೈಯಕ್ತಿಕ ಚಾಂಪಿಯನ್ ಆಗಿ ಕುಮಾರ್ ಹಾಗೂ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಆಗಿ ವರ್ಷಿಣಿ ಹೊರಹೊಮ್ಮಿದ್ದಾರೆ. ಬಾಲಕರ ಹಾಗೂ ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಸೇರಿದಂತೆ ಒಟ್ಟಾರೆ ಸಮಗ್ರ ಪ್ರಶಸ್ತಿಯನ್ನು ಕಾಲೇಜು ತನ್ನದಾಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸಿ.ಜೆ. ಮಂಜುನಾಥ್, ಕಾರ್ಯದರ್ಶಿ ಅಡ್ವೊಕೇಟ್ ಜಲೇಂದ್ರ, ಖಜಾಂಚಿ ಮರುವನಹಳ್ಳಿ ಸಂತೋಷ್, ನಿರ್ದೇಶಕರಾದ ಕೆಂಬಾಳು ಶರತ್, ಆನಂದ್ ಕಾಳೇನಹಳ್ಳಿ, ಓ.ಆರ್. ರಂಗೇಗೌಡ, ಗೋವಿಂದ್ರಾಜ್, ಕೆ.ಎಲ್. ಶಿವಕುಮಾರ್, ಡಾ. ಪ್ರಮೋದ್, ಜೆ.ಕೆ. ರಾಘವೇಂದ್ರ, ಕಾಲೇಜಿನ ಪ್ರಾಂಶುಪಾಲ ಸಂಜಯ್ ಕುಮಾರ್, ಉಪ ಪ್ರಾಂಶುಪಾಲ ಎಸ್.ಸಿ. ಸುರೇಶ್ ಕುಮಾರ್, ದೈಹಿಕ ಶಿಕ್ಷಣ ಉಪನ್ಯಾಸಕ ಚಿಕ್ಕೇಗೌಡ ಸೇರಿದಂತೆ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
-ಮಂಜುನಾಥ್ ಐ.ಕೆ.
