ಹಾಸನ: ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಹಾಸನದ ಸಂಸ್ಕೃತ ಭವನದಲ್ಲಿ ಏಪ್ರಿಲ್ 15ರಂದು (ಮಂಗಳವಾರ) ಚಿತ್ರಕಲಾ ಪ್ರದರ್ಶನ ಹಾಗೂ ವಿವಿಧ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಲೆಯ ಮಹತ್ವವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವಪ್ರಸಿದ್ಧ ಕಲಾವಿದ Leonardo da Vinci ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಕಲಾ ದಿನದ ಪ್ರಯುಕ್ತ ಈ ಕಾರ್ಯಕ್ರಮ ನಡೆಯುತ್ತಿದ್ದು, ಹೊಯ್ಸಳ ಚಿತ್ರಕಲಾ ಪರಿಷತ್, ಚಿತ್ರಕಲಾ ಶಿಕ್ಷಕರ ಸಂಘ, ಸಂಸ್ಕಾರ ಭಾರತಿ, ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತ ಸಂಘ ಹಾಗೂ ಅವನಿ ಅರ್ಗ್ಯಾನಿಕ್ ಹಾಸನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ರೂಪುಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಚಿತ್ರರಚನೆ-ವಿಮರ್ಶೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಹಿರಿಯ ಕಲಾವಿದ ಶಿವಶಂಕರಪ್ಪ ಜಿ.ಎಸ್ ಅವರ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಜೊತೆಗೆ ಯುವ ಕಲಾವಿದರಾದ ಯತಿನ್ ಪಿ, ಮೋಕ್ಷಿತ್, ಧನಿಕ್ ಅಶೋಕ, ನಕ್ಷತ್ರ ನಾಗರಾಜು, ಅಮೂಲ್ಯ ಹಾಗೂ ತಿಲಕ್ ಅವರ ಕಲಾಕೃತಿಗಳನ್ನೂ ಪ್ರದರ್ಶಿಸಲಾಗುತ್ತದೆ.
ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಎಲ್ಕೆಜಿ-ಯುಕೆಜಿ ರಿಂದ 9-10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 6 ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧಾರ್ಥಿಗಳಿಗೆ ಡ್ರಾಯಿಂಗ್ ಶೀಟ್ ಒದಗಿಸಲಾಗುತ್ತದೆ, ಆದರೆ ಅಗತ್ಯ ಚಿತ್ರೋಪಕರಣಗಳನ್ನು ತಾವೇ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಉದ್ಘಾಟಿಸಲಿದ್ದು, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ. ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸಂಘದ ಅಧ್ಯಕ್ಷ ಕೆಂಚೇಗೌಡರು, ಲೋಕೇಶ್, ಬಸವರಾಜ್ ಹೆಚ್.ಸಿ., ತಾರಾನಾಥ್, ಬೊಮ್ಮೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಸಂಘದ ನಿರ್ದೇಶಕ ಮಂಜುನಾಥ್ ಜಿ.ಎಸ್., ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಸೇರಿದಂತೆ ಅನೇಕ ಕಲಾವಿದರು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಕುರಿತು ಹೊಯ್ಸಳ ಚಿತ್ರಕಲಾ ಪರಿಷತ್ ಪ್ರಧಾನ ಸಂಚಾಲಕ ಶಂಕರಪ್ಪ ಕೆ.ಎನ್ ಮಾಹಿತಿ ನೀಡಿದ್ದಾರೆ.