ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ (Digital Arrest) ದಂದೆಗಳಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ನಿರ್ದೇಶನ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಪ್ರಗತಿ (PRAGATI) ಸಮಾಲೋಚನಾ ಸಭೆಯ 52ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ, ಸೈಬರ್ ವಂಚನೆಗೆ ಒಳಗಾದ ನಾಗರಿಕರು ಅಲೆಯುವುದನ್ನು ತಪ್ಪಿಸಲು ದೇಶದ ಎಲ್ಲಾ ರಾಜ್ಯಗಳು ತಕ್ಷಣವೇ ಜಿಲಾ ರಹಿತ ‘ಇ-ಝೀರೋ ಎಫ್ಐಆರ್’ (e-Zero FIR) ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಸದ್ಯ ದೇಶದ ಕೇವಲ 9 ರಾಜ್ಯಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ದೇಶಾದ್ಯಂತ ವಿಸ್ತರಿಸಲು ಪ್ರಧಾನಿ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
1. ಏನಿದು ‘ಇ-ಝೀರೋ ಎಫ್ಐಆರ್’ (e-Zero FIR) ವ್ಯವಸ್ಥೆ?
ಸಾಮಾನ್ಯವಾಗಿ ಯಾವುದೇ ಅಪರಾಧ ನಡೆದರೆ, ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಾಗುತ್ತದೆ. ಆದರೆ ಸೈಬರ್ ಅಪರಾಧಗಳಿಗೆ ಯಾವುದೇ ಭೌಗೋಳಿಕ ಗಡಿ ಇರುವುದಿಲ್ಲ.
-
ವ್ಯಾಪ್ತಿಯ ಹಂಗಿಲ್ಲ: ಇ-ಝೀರೋ ಎಫ್ಐಆರ್ ವ್ಯವಸ್ಥೆಯಡಿ, ಸಂತ್ರಸ್ತರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಆನ್ಲೈನ್ ಮೂಲಕ ತಕ್ಷಣವೇ ದೂರು ದಾಖಲಿಸಬಹುದು. ಇದಕ್ಕೆ ಯಾವುದೇ ಠಾಣೆಯ ಗಡಿ ಅನ್ವಯಿಸುವುದಿಲ್ಲ.
-
ಸ್ವಯಂಚಾಲಿತ ಪರಿವರ್ತನೆ: ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಅಥವಾ ಹೆಲ್ಪ್ಲೈನ್ ಸಂಖ್ಯೆ 1930 ರ ಮೂಲಕ ಸಲ್ಲಿಕೆಯಾಗುವ ₹10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸೈಬರ್ ವಂಚನೆ ದೂರುಗಳು ಸ್ವಯಂಚಾಲಿತವಾಗಿ ‘ಇ-ಝೀರೋ ಎಫ್ಐಆರ್’ ಆಗಿ ಬದಲಾಗುತ್ತವೆ.
-
ವರ್ಗಾವಣೆ: ದೂರು ದಾಖಲಾದ ತಕ್ಷಣ ತನಿಖೆ ಆರಂಭವಾಗುತ್ತದೆ ಮತ್ತು ನಂತರ ಪ್ರಕರಣವನ್ನು ಸೂಕ್ತ ತನಿಖಾ ವ್ಯಾಪ್ತಿಯ ಠಾಣೆಗೆ ವರ್ಗಾಯಿಸಲಾಗುತ್ತದೆ. ಇದು ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕಾನೂನುಬದ್ಧ ಮಾನ್ಯತೆ ಪಡೆದಿದೆ.
2. ‘ಗೋಲ್ಡನ್ ಅವರ್’ ಮತ್ತು ತಕ್ಷಣದ ಹಣ ತಡೆ
ಸೈಬರ್ ವಂಚನೆ ನಡೆದ ಮೊದಲ ಕೆಲವು ಗಂಟೆಗಳನ್ನು ‘ಗೋಲ್ಡನ್ ಅವರ್’ (Golden Hour) ಎನ್ನಲಾಗುತ್ತದೆ. ಈ ಅವಧಿಯಲ್ಲಿ ವಂಚಕರು ಹಣವನ್ನು ಬ್ಯಾಂಕ್ ಖಾತೆಗಳಿಂದ ಬೇರೆಡೆಗೆ ವರ್ಗಾಯಿಸುವ ಮುನ್ನವೇ ಇ-ಝೀರೋ ಎಫ್ಐಆರ್ ದಾಖಲಿಸುವುದರಿಂದ ಬ್ಯಾಂಕುಗಳು ಮತ್ತು ತನಿಖಾ ಸಂಸ್ಥೆಗಳಿಗೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಕಳುವಾದ ಸಾರ್ವಜನಿಕರ ಹಣವನ್ನು ಬ್ಯಾಂಕ್ ಖಾತೆಗಳಲ್ಲೇ ಫ್ರೀಜ್ (Freeze) ಮಾಡಿ ರಿಕವರಿ ಮಾಡಲು ಸಹಾಯವಾಗುತ್ತದೆ.
3. I4C ಅಡಿಯಲ್ಲಿ ಡಿಜಿಟಲ್ ನೆಟ್ವರ್ಕ್
ಈ ವ್ಯವಸ್ಥೆಯನ್ನು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ನಿರ್ವಹಿಸುತ್ತಿದೆ. ಇದು ದೇಶದ ಎಲ್ಲಾ ರಾಜ್ಯಗಳ ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು, ಬ್ಯಾಂಕುಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಒಂದೇ ಸೂರಿನಡಿ ತರಲಿದ್ದು, ತನಿಖೆಯನ್ನು ವೇಗಗೊಳಿಸಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖಾಂಶಗಳು (Quick Exam Facts)
-
PRAGATI ಅಂದರೆ: Pro-Active Governance and Timely Implementation (ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ). ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ತಂತ್ರಜ್ಞಾನ ಆಧಾರಿತ 3-ಹಂತದ ವೇದಿಕೆಯಾಗಿದೆ.
-
I4C: Indian Cybercrime Coordination Centre (ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿದೆ).
-
ರಾಷ್ಟ್ರೀಯ ಸೈಬರ್ ಹೆಲ್ಪ್ಲೈನ್: 1930 (ವಿಶೇಷವಾಗಿ ಆರ್ಥಿಕ ಸೈಬರ್ ವಂಚನೆಗಳ ವರದಿಗಾಗಿ).
-
ಹಣಕಾಸು ಮಿತಿ: ಇ-ಝೀರೋ ಎಫ್ಐಆರ್ ಸ್ವಯಂಚಾಲಿತ ಪ್ರಕ್ರಿಯೆಯು ಪ್ರಸ್ತುತ ₹10 ಲಕ್ಷಕ್ಕಿಂತ ಹೆಚ್ಚಿನ ವಂಚನೆ ಪ್ರಕರಣಗಳಿಗೆ ಅನ್ವಯಿಸುತ್ತದೆ.
